ಬೆಂಗಳೂರು: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಎತ್ತಿನಹೊಳೆ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಕೋರಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ಮಂಗಳವಾರ ಸರ್ಕಾರಕ್ಕೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು, ಎತ್ತಿನಹೊಳೆ ಯೋಜನೆಯಲ್ಲಿ ಇರುವ ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ಟಿ.ಬಿ ಜಯಚಂದ್ರ ಅವರು ಮಾತನಾಡಿ, ಶಿರಾ ತಾಲೂಕಿನ 200 ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಗಮನ ಸೆಳೆದರು. ಈಗಾಗಲೇ ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ ಹಾಗೂ ಮಧುಗಿರಿ ತಾಲೂಕುಗಳ ಅಂತರ್ಜಲ ಅಭಿವೃದ್ಧಿಗೆ 4.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಶಿರಾ ತಾಲೂಕಿನ ಕೆರೆಗಳಲ್ಲಿ ಮಳೆ ನೀರು ಶೇಖರಣೆ ಕಷ್ಟವಾಗಿದ್ದು, ಈ ಭಾಗದ ಅಂತರ್ಜಲ ಮಟ್ಟ ಕುಸಿದಿದೆ. ಈ ಭಾಗದ ಜನ ಫ್ಲೋರೈಡ್ನಿಂದ ಕೂಡಿದ ನೀರನ್ನು ಕುಡಿಯುವಂತಾಗಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿರಿಯ ಶಾಸಕ ಜಯಚಂದ್ರ ಅವರ ಜೊತೆ ಚರ್ಚೆ ಮಾಡಿ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೇ, ಎತ್ತಿನಹೊಳೆ ಯೋಜನೆ ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಅದಷ್ಟು ಬೇಗ ಅದನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತ್ ರೈಸ್ ಹೆಸರಲ್ಲಿ ದೇಶವನ್ನ ಆರ್ಥಿಕ ದಿವಾಳಿಗೆ ನೂಕಲಾಗುತ್ತಿದೆ: ಸಚಿವ ಮುನಿಯಪ್ಪ
ಬೆಂಬಲ ಬೆಲೆಗೆ ಒತ್ತಾಯ: ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸುವಂತೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಪಕ್ಷಭೇದ ಮರೆತು ಸರ್ಕಾರಕ್ಕೆ ಒತ್ತಾಯ ಮಾಡಿದರು. ಈ ಬಗ್ಗೆ ಶಾಸಕ ಹೆಚ್.ಡಿ.ರೇವಣ್ಣ ವಿಷಯ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಭೇಟಿಯಾಗಿ ಕೊಬ್ಬರಿ ಖರೀದಿ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆ ಬಳಿಕ ಕೇಂದ್ರವು ಪ್ರತಿ ಕ್ವಿಂಟಲ್‍ಗೆ 12 ಸಾವಿರ ರೂ.ನಂತೆ ಖರೀದಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವು ಕಡೆ ಲೋಪದೋಷಗಳಿವೆ. ಅದನ್ನು ಸರಿದೂಗಿಸಲು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಕೇವಲ 250 ರೂ. ಮಾತ್ರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ಕೊಬ್ಬರಿಗೆ 1,500 ರೂ. ಬೆಲೆ ನೀಡುತ್ತಿದೆ. ಕೇಂದ್ರವು 15 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಸಬೇಕು ಎಂದು ತಿಳಿಸಿದರು. ಈ ವೇಳೆ ಶಿವಲಿಂಗೇಗೌಡ, ಬಾಲಕೃಷ್ಣ ಹಾಗೂ ಹೆಚ್.ಡಿ.ರೇವಣ್ಣ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಬಳಿಕ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡುತ್ತ, ರೈತರ ಬಳಿ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಉಳಿದಿದೆ. ಅದರ ಖರೀದಿಗೆ ಕ್ರಮ ಕೈಗೊಳ್ಳಬೇಕು. ಬೆಳೆಗಾರರಲ್ಲದವರಿಂದ ಖರೀದಿ ಮಾಡಿರುವುದರ ಬಗ್ಗೆ ನೈಜತೆ ಪರಿಶೀಲನೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.