ಬೆಂಗಳೂರು: "ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟು ರಾಹುಲ್ ಗಾಂಧಿ ಜೈಲು ಶಿಕ್ಷೆ ಅನುಭವಿಸುವ ಹಂತಕ್ಕೆ ಬಂದರೂ ಕಾಂಗ್ರೆಸ್ನವರಿಗೆ ಬುದ್ಧಿ ಬಂದಿಲ್ಲ. ಅವಹೇಳನಕಾರಿ ಹೇಳಿಕೆ ನೀಡುವುದು ಕಾಂಗ್ರೆಸ್ ನಾಯಕರ ಡಿಎನ್ಎಯಲ್ಲೇ ಬಂದಿದೆ. ಅಮಿತ್ ಶಾ ಅವರ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿರುದ್ಧ ದೂರು ನೀಡುತ್ತೇವೆ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು ಸರಿಯಲ್ಲ. ಯತೀಂದ್ರಗೆ ಇಮ್ಮೆಚೂರಿಟಿ, ಬುದ್ಧಿ ಇಲ್ಲ. ಯಾರ ಬಗ್ಗೆ ಮಾತಾಡಬೇಕು ಅನ್ನೋ ಲೆವೆಲ್ ಇಲ್ಲದ ವ್ಯಕ್ತಿ. ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯನ್ನು ಕಾಂಗ್ರೆಸ್ ಹಿಂದಿನಿಂದಲೂ ಮಾತಾಡಿಕೊಂಡು ಬರುತ್ತಿದೆ. ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಬಾಲಿಷ ಹೇಳಿಕೆ ನೀಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಜೈಲು ಶಿಕ್ಷೆ ಅನುಭವಿಸುವ ಹಂತಕ್ಕೆ ಬಂದಿದ್ದಾರೆ. ಈಗ ಯತೀಂದ್ರ ಅವರ ವಿರುದ್ಧ ದೂರು ನೀಡುತ್ತೇವೆ." ಎಂದು ಹೇಳಿದರು.
ನಾವು ಹಾಲು ಜೇನಿನಂತೆ ಒಂದಾಗಿದ್ದೇವೆ: ಇಂದಿನ ಸಭೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, "ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ನವರು ಹಾಲು, ಜೇನಿನಂತೆ ಒಟ್ಟಾಗಿದ್ದೇವೆ. ಈಗಾಗಲೇ ಕುಮಾರಸ್ವಾಮಿ ಅವರ ಜೊತೆ ಸಭೆ ಮಾಡಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಹಾಗಾಗಿ ಒಟ್ಟಿಗೆ ಕೆಲಸ ಮಾಡೋ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಸರ್ಕಾರ ಬರಕ್ಕೆ ಹಣ ನೀಡಿಲ್ಲ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಭೆ ನಡೆದಿದೆ. ಮುಂದೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಒಟ್ಟಾಗುತ್ತೇವೆ" ಎಂದರು.
ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, "ಬೈಗುಳದಿಂದ ರಾಜಕಾರಣ ಮಾಡುವುದಾದರೆ, ಅನೇಕರು ರಾಜಕಾರಣ ಮಾಡಬಹುದಿತ್ತು. ಬೈಗುಳದಿಂದ ರಾಜಕಾರಣ ಮಾಡುವವರ ಸಾಲಿಗೆ ಯತೀಂದ್ರ ಸೇರಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ, ದೊಡ್ಡ ರಾಜಕಾರಣಿ ಆಗುತ್ತೇನೆ ಅಂತ ಭಾವಿಸಿದರೆ, ಅದೇ ಕೊನೇ ಮೊಳೆ ಆಗಲಿದೆ. ಅವರ ತಂದೆ ಬಜೆಟ್ ಬಗ್ಗೆ ಮಾತಾಡಲಿ. ಅದು ಬಿಟ್ಟು ಬಿಜೆಪಿ, ಬಿಜೆಪಿ ನಾಯಕರ ಬಗ್ಗೆ ಮಾತನಾಡೋದು ಸರಿಯಲ್ಲ. ಸಿದ್ದರಾಮಯ್ಯ ಅವರ ಮಗನಾಗಿ, ಗೌರವಯುತವಾಗಿ ಮಾತಾಡೋದು ಕಲಿಯಲಿ. ಜನ ಈ ಬಾರಿಯೂ ಮೋದಿ ಅವರನ್ನು ಗೆಲ್ಲಿಸಿ, ಪ್ರಧಾನಿ ಮಾಡಲ ನಿಶ್ಚಯ ಮಾಡಿದ್ದಾರೆ" ಎಂದರು.
ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಮಾತನಾಡಿ, "ಮಾಜಿ ಶಾಸಕ ಯತೀಂದ್ರ ಕೇಂದ್ರ ಗೃಹಸಚಿವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಮಾತಿನ ಮೇಲೆ, ನಡವಳಿಕೆ ಮೇಲೆ ನಿಲ್ಲಬೇಕು. ಎಲ್ಲೆ ಮೀರಿದ ಕೀಳು ಮಟ್ಟದ ರಾಜಕೀಯ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ. ನಮ್ಮ ಗೃಹಸಚಿವ ಅಮಿತ್ ಶಾ ಅವರನ್ನು ಗೂಂಡಾ ಅಂತ ಹೇಳಿಕೆ ನೀಡಿರುವ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕು. ಕೀಳುಮಟ್ಟದ ಹೇಳಿಕೆ ಸರಿಯಲ್ಲ. ಅವರೊಬ್ಬ ಡಾಕ್ಟರ್ ಆಗಿದ್ದು, ಅವರ ವ್ಯಕ್ತಿತ್ವಕ್ಕೂ ಹೊಂದಾಣಿಕೆ ಇಲ್ಲ" ಎಂದರು.
ಮಂಜುನಾಥ್ ವೈಟ್ ಕಾಲರ್ ರಾಜಕಾರಣಿ ಎಂದ ಸಿಎಂ ಹಾಗೂ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ ನಾರಾಯಣ್, "ಜನಸೇವೆ ಅಂದರೆ ಏನು ಅಂತ ಲೋಕಸಭೆ ಸದಸ್ಯ ಡಿ.ಕೆ. ಸುರೇಶ್ ಅವರನ್ನು ಕೇಳಬೇಕು. ಇವತ್ತು ಇವರು ಯಾರಾದ್ರೂ ಜನಸೇವೆ ಮಾಡಿರೋದು ಹೇಳ್ತಾರಾ? ಮಂಜುನಾಥ್ ವೈದ್ಯರಾಗಿ ಕೆಲಸ ಮಾಡಿದ್ದಾರೆ. ಜಾತ್ಯತೀತವಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಒಪ್ಪಿರೋ ಅಪರೂಪದ ವ್ಯಕ್ತಿ ಮಂಜುನಾಥ್. ಸುರೇಶ್‌ಗೂ, ಮಂಜುನಾಥ್ ಅವರಿಗೂ ವ್ಯತ್ಯಾಸ ಇದೆ. ಮಂಜುನಾಥ್ ಅವರ ಬಗ್ಗೆ ಸಂಪೂರ್ಣ ಹತಾಶೆಯಾಗಿ ಹೇಳಿಕೆ ಕೊಟ್ಟಿದ್ದೀರಿ. ಇದಕ್ಕೆ ತಿರುಗೇಟು ಜನ ಕೊಡ್ತಾರೆ. ಎಲ್ಲರ ಆಶೀರ್ವಾದ ಮಂಜುನಾಥ್ ಅವರ ಪರ ಇದೆ. ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸ ಇದೆ" ಎಂದರು.
ಇದನ್ನೂ ಓದಿ: ಮೋದಿ ಬೈದವರಿಗೆ ಬೆಳಗಾವಿ ಬಿಜೆಪಿ ಟಿಕೆಟ್: ಬಿಜೆಪಿ ಕಟ್ಟಾಳು ಮಹಾಂತೇಶ ವಕ್ಕುಂದ ಬಂಡಾಯ - Mahantesh Vakkunda