ಹಾವೇರಿ: ಸಾಮಾನ್ಯ ಕುಟುಂಬದಿಂದ ಬಂದಂತಹ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನನ್ನು ಎಲ್ಲ ಸಮುದಾಯದ ಗುರು - ಹಿರಿಯರು ಕೂಡಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಶಿಗ್ಗಾಂವಿ ಕ್ಷೇತ್ರದ ನೂತನ ಶಾಸಕ ಯಾಸೀರ್ ಖಾನ್ ಪಠಾಣ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಶಿವಾನಂದ ಪಾಟೀಲ್, ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಮಂಕಾಳ್ ವೈದ್ಯ ಸೇರಿದಂತೆ ಸಮಾಜದ ಎಲ್ಲ ಮುಖಂಡರಿಗೂ ನನ್ನ ಅನಂತ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದಿದ್ದಾರೆ.
ಜನರಿಗೆ ನಿಮ್ಮ ಕೊಡುಗೆ ಏನು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದರು.
ನಮ್ಮ ಸರ್ಕಾರ ಈಗಾಗಲೇ ಹಲವು ಕಡೆ ಮಾತನ್ನು ಕೊಟ್ಟಿದೆ. ನಮ್ಮ ಸರ್ಕಾರ ಹೇಗೆ ಗ್ಯಾರಂಟಿ ಕೊಟ್ಟಿದೆಯೋ ಅದೇ ರೀತಿ ಮುಂಬರುವ ಮೂರುವರೆ ವರ್ಷದಲ್ಲಿ ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪಠಾಣ್ ಪಡೆದ ಮತಗಳೆಷ್ಟು?: ಯಾಸೀರ್ ಖಾನ್ ಪಠಾಣ್ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 1,00,756 ಮತಗಳನ್ನ ಪಡೆದಿದ್ದಾರೆ. 13,448 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : 3 ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಜಯಭೇರಿ: 'ಕೈ' ಪಾಳಯದ ಗೆಲುವಿನ ಗುಟ್ಟೇನು?