ಬೆಳಗಾವಿ: ಮೂರು ವರ್ಷಗಳ ಅವಧಿಯಲ್ಲಿ ಮೂರು ಸುಪಾರಿ ಕೊಲೆ ಮಾಡಿದ್ದ ಖತರನಾಕ್ ಗ್ಯಾಂಗ್ ಬಂಧಿಸುವಲ್ಲಿ ಜಿಲ್ಲೆಯ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಪಾರಿ ಕೊಟ್ಟಿದ್ದ ಇಬ್ಬರು ಮಹಿಳೆಯರು ಸೇರಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಘಾತ, ಆತ್ಮಹತ್ಯೆ, ಹೃದಯಘಾತ ಎಂದು ಬಿಂಬಿಸಿದ್ದ ಪ್ರಕರಣಗಳನ್ನು ಕೊಲೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಸುಪಾರಿ ಹಂತಕರಾದ ಹುಕ್ಕೇರಿ ತಾಲೂಕಿನ ಹಟ್ಟಿಆಲೂರದ ಆಕಾಶ ಬಸಲಿಂಗಪ್ಪ ಗೋಕಾವಿ, ರಮೇಶ ಲಗಮಪ್ಪಾ ಮಾಳಗಿ ಹಾಗೂ ಪಾಶ್ಚಾಪುರದ ಅಪ್ಪಣ್ಣ ಮುಶಪ್ಪ ನಾಯಿಕ, ಸುಪಾರಿ ನೀಡಿದ ಮೃತರ ಪತ್ನಿ ಮಾಲಾ ಸುಟಕಣ್ಣವರ, ಇನ್ನೋರ್ವ ಮೃತನ ಪತ್ನಿ ಯಲ್ಲವ್ವ ವಿಠಲ ಮರೆಪ್ಪಗೋಳ ಹಾಗೂ ಈಕೆಯ ಪ್ರಿಯಕರ ನಾಗಪ್ಪ ಮಾಳಗಿ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
70 ಸಾವಿರ ರೂ. ಸುಪಾರಿ: ಹುಕ್ಕೇರಿ ತಾಲೂಕಿನ ಹಳ್ಳದಕೇರಿಯ ಹಾಲಿ ಹಟ್ಟಿ ಆಲೂರ ಗ್ರಾಮದ ನಿವಾಸಿಯಾಗಿದ್ದ ಮಹಾಂತೇಶ ಭೀಮಪ್ಪ ಸುಟಕಣ್ಣವರ(34) ಎಂಬವರು 2024 ಏಪ್ರಿಲ್‌ನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ಅವರ ಸಹೋದರ ಕಲ್ಲಪ್ಪ ಸುಟಗನ್ನವರ ಜ.10ರಂದು ಠಾಣೆಗೆ ಬಂದು ದೂರು ನೀಡಿ, ಮೃತನ ಹೆಂಡತಿ ಹಾಗೂ ಇತರರ ಮೇಲೆ ಸಂಶಯದ ಬಗ್ಗೆ ದೂರು ನೀಡಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಪತ್ನಿ ಮಾಲಾ ಮಹಾಂತೇಶ ಸುಟಗಣ್ಣವರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಪತಿ ಸಾರಾಯಿ ಕುಡಿದು ಬಂದು ದಿನನಿತ್ಯ ಕಿರುಕುಳ ನೀಡುತ್ತಿದ್ದ, ಇದರಿಂದ ಬೇಸತ್ತು ಆಕಾಶ ಗೋಕಾವಿ ಎಂಬಾತನಿಗೆ 70 ಸಾವಿರ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಹಂತಕರಿಗೆ 30 ಸಾವಿರ ರೂ. ಫೋನ್‌ಪೇ ಮಾಡಿದ್ದರು. ಆಕಾಶ್ ತನ್ನ ಸ್ನೇಹಿತರಾದ ರಮೇಶ್ ಮಾಳಗಿ ಹಾಗೂ ಅಪ್ಪಣ್ಣ ನಾಯಿಕ ಮೂವರು ಸೇರಿಕೊಂಡು ಮಹಾಂತೇಶನಿಗೆ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಮನೆಗೆ ತಂದು ಕೊಟ್ಟಿದ್ದರು. ಪತ್ನಿ ಮಾಲಾ, ಪತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ನಾಟಕವಾಡಿ ಯಾರಿಗೂ ಅನುಮಾನ ಬರದಂತೆ ಅಂತ್ಯಕ್ರಿಯೆ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಅಣ್ಣನನ್ನೇ ಕೊಂದ ತಮ್ಮ: ಹಟ್ಟಿ ಆಲೂರದ ಆರೋಪಿ ರಮೇಶ್ ಲಗಮಪ್ಪ ಮಾಳಗಿ ಹಿರಿಯಣ್ಣ ವಿಠಲ ಮಾಳಗಿ ಸಾರಾಯಿ ಚಟಕ್ಕೆ ಅಂಟಿಕೊಂಡಿದ್ದ. ತನ್ನ ಜಮೀನು 22 ಲಕ್ಷ ರೂ. ಗೆ ಅಡವಿಟ್ಟಿದ್ದರಿಂದ ಸಿಟ್ಟಿಗೆದ್ದು, 2022ರಲ್ಲಿ ರಮೇಶ್ ತನ್ನ ಸ್ನೇಹಿತರಾದ ಆಕಾಶ್ ಗೋಕಾವಿ, ಆಪಣ್ಣ ನಾಯಕನೊಂದಿಗೆ ಸೇರಿ ವಿಠಲ ಅವರನ್ನು ಪಾಶ್ಚಾಪೂರ ಹತ್ತಿರದ ಕುಂದರಗಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕಂಠಪೂರ್ತಿ ಸಾರಾಯಿ ಕುಡಿಸಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಹೆಣವನ್ನು ಬೈಕ್ ಮೇಲೆ ತೆಗೆದುಕೊಂಡು ಬಂದು ಅವರ ಮನೆ ಹತ್ತಿರದ ರಸ್ತೆಯಲ್ಲಿ ಕೆಡವಿ ಅಪಘಾತದಿಂದ ಮೃತಪಟ್ಟಿರುವುದಾಗಿ ಕತೆ ಕಟ್ಟಿದ್ದರು. ಪೊಲೀಸರಿಗೂ ದೂರು ನೀಡದೇ ತರಾತುರಿಯಲ್ಲಿ ಮೃತದೇಹ ಸುಟ್ಟು ಅಂತ್ಯಕ್ರಿಯೆ ಮಾಡಿ ಸಾಕ್ಷಿ ಪುರಾವೆ ನಾಶಪಡಿಸಿದ್ದರು. ಆದರೆ, ನಮ್ಮ ಪೊಲೀಸರ ತನಿಖೆಯಿಂದ ಆರೋಪಿಗಳ ಕೃತ್ಯ ಬಯಲಾಗಿದೆ ಎಂದು ಡಾ.ಭೀಮಾಶಂಕರ್ ಗುಳೇದ ವಿವರಿಸಿದರು.
ಅನೈತಿಕ ಸಂಬಂಧ- ಪತಿ ಹತ್ಯೆ: ಹಟ್ಟಿ ಆಲೂರದ ಯಲ್ಲವ್ವ ನಾಗಪ್ಪ ಮರೆಪ್ಪಗೋಳ ಹಾಗೂ ನಾಗಪ್ಪ ಸಿದ್ದಪ್ಪ ಮಾಳಗಿ ಎಂಬವರ ಮಧ್ಯೆ ಅನೈತಿಕ ಸಂಬಂಧ ಇತ್ತು. ಇದಕ್ಕೆ ಪತಿ ನಾಗಪ್ಪ ವಿಠಲ ಮರೆಪ್ಪಗೋಳ ಅಡ್ಡಿಪಡಿಸುತ್ತಿದ್ದಾನೆ ಎಂದು ಯಲ್ಲಪ್ಪ ಹಾಗೂ ಪ್ರಿಯಕರ ಸೇರಿ ರಮೇಶ, ಅಪ್ಪಣ್ಣಗೆ 3 ಲಕ್ಷ ರೂ. ಸುಪಾರಿ ಕೊಡಲು ಒಪ್ಪಿ ಮುಂಗಡವಾಗಿ 65 ಸಾವಿರ ರೂ. ಹಣ ಕೊಟ್ಟಿದ್ದರು. ನಾಗಪ್ಪ ಮರೆಪ್ಪಗೋಳ ಅವರನ್ನು ಸಾವಳಗಿ ಜಾತ್ರೆಗೆ ಕರೆದುಕೊಂಡು ಹೋಗಿ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮೃತದೇಹವನ್ನು ಪರಕನಟ್ಟಿ ಸಮೀಪ ರೈಲ್ವೆ ಹಳಿ ಮೇಲೆ ಮಲಗಿಸಿ ಆತ್ಮಹತ್ಯೆಯನ್ನಾಗಿ ಬಿಂಬಿಸಿದ್ದರು.
ಒಂದು ದೂರಿನ ಮೇಲೆ ಮೂರು ಕೊಲೆ ಪ್ರಕರಣಗಳನ್ನು ಯಮಕನಮರಡಿ ಠಾಣೆ ಸಿಪಿಐ ಜಾವೇದ್ ಮುಶಾಪುರಿ ನೇತೃತ್ವದಲ್ಲಿ ಪಿಎಸ್‌ಐ ಎಸ್.ಕೆ. ಮನ್ನಿಕೇರಿ, ಸಿಬ್ಬಂದಿ ಕೆ.ಬಿ.ಚಂಡೂರಿ, ಎಸ್.ಬಿ. ಪೂಜೇರಿ, ಪಿ.ಎಂ. ಅರಬಳ್ಳಿ, ಶಂಕರ ಚೌಗಲಾ, ಎಲ್.ಬಿ. ಹಮಾಣಿ, ಸುನೀಲ ಚಂದರಿ, ಪಿಡಿ, ಗವಾಣಿ, ರಾಜಶ್ರೀ ನಾಯಿಕ, ಮಾಲಾ ಸನದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ.ಭೀಮಾಶಂಕರ್ ಗುಳೇದ ಹೇಳಿದರು.
ಇದನ್ನೂ ಓದಿ: ಮೈಸೂರು: ಪತ್ನಿ ಕೊಂದು ಪೊಲೀಸ್ ಠಾಣೆಗೆ ಶರಣಾದ ಪತಿ!