ಬಾಗಲಕೋಟೆ: ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಪರಿಣಾಮ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮುಧೋಳ ಪಟ್ಟಣದ ಯಾದವಾಡ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಘಟಪ್ರಭಾ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹರಿದು ಬಿಡಲಾಗಿದೆ. ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದ ಹಿನ್ನೆಲೆ ಸೇತುವೆ ಮುಳುಗಡೆಯಾಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸುಮಾರು 10ಕ್ಕೂ ಅಧಿಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಉತ್ತೂರು, ಮಿರ್ಜಿ ಹಾಗೂ ಯಾದವಾಡಗೆ ಸೇರಿದಂತೆ ಇತರ ಗ್ರಾಮಗಳಿಗೆ ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಕಬ್ಬು, ಮೆಕ್ಕೆಜೋಳ, ಅರಿಶಿಣ ಸೇರಿದಂತೆ ಇತರ ಬೆಳೆಗಳು ನೀರುಪಾಲಾಗಿವೆ.
ಮತ್ತೊಂದೆಡೆ, ಚಿಂಚಖಂಡಿ ಸೇತುವೆ ಮುಳಗಡೆಯಿಂದಾಗಿ ಬೆಳಗಾವಿ - ವಿಜಯಪುರ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ. ಲೋಕಾಪೂರದಿಂದ ಮುಧೋಳ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಗದ್ದನಕೇರಿ ಕ್ರಾಸ್ ಮೂಲಕ ಬೀಳಗಿ ಪಟ್ಟಣದಿಂದ ಮುಧೋಳ, ಜಮಖಂಡಿ ಮಾರ್ಗವಾಗಿ ವಿಜಯಪುರಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಜಲಾಶಯದಿಂದ ನಿರೀಕ್ಷೆಗಿಂತ ಹೆಚ್ಚು ನೀರು ಬಿಡುಗಡೆ: ಪ್ರವಾಸಿಗರಿಗೆ ಮೇಕೆದಾಟು ಪ್ರವೇಶ ನಿಷೇಧ - Cauvery River