ಬೆಳಗಾವಿ: ಆ ಮಹಿಳೆ ಸ್ವತಃ ಹೆಚ್ಐವಿ ಪೀಡಿತೆ. ಹಾಗಂತ ಅವರೇನು ಧೃತಿಗೆಡಲಿಲ್ಲ. ಮಾರಣಾಂತಿಕ ರೋಗವನ್ನು ಮೆಟ್ಟಿ ನಿಂತು, ಹೆಚ್ಐವಿ ಸೋಂಕಿತ ಮಹಿಳೆಯರ ಪಾಲಿಗೆ ಮಹಾತಾಯಿ ಆಗಿದ್ದಾರೆ.
ಬೆಳಗಾವಿಯ ಮೂಲದ ಹೆಚ್ವಿಐ ಸೋಂಕಿತ ಮಹಿಳೆ ಹೆಚ್ಐವಿ ಪೀಡಿತರಿಗೆ ಅನ್ನ, ಆಶ್ರಯ, ಶಿಕ್ಷಣ ಕೊಡಿಸುವ ಜೊತೆಗೆ ಹೊಸ ಬದುಕು ಕಟ್ಟಿ ಕೊಟ್ಟಿದ್ದಾರೆ. ಮಹಾಮಾರಿ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆಶ್ರಯ ಫೌಂಡೇಶನ್ ಸ್ಥಾಪಿಸಿ, ಆ ಮೂಲಕ ಹೆಚ್ಐವಿ ಪೀಡಿತರಿಗೆ ಕೌನ್ಸೆಲಿಂಗ್, ತರಬೇತಿ, ಶಿಕ್ಷಣ ಹಾಗೂ ಉದ್ಯೋಗಗಳನ್ನು ನೀಡಿ ಧೈರ್ಯ ತುಂಬುವ ಮಹತ್ತರ ಕಾರ್ಯದ ಮೂಲಕ ವಿಶಿಷ್ಟ ಮಹಿಳಾ ಸಾಧಕಿಯಾಗಿ ಹೊರ ಹೊಮ್ಮಿದ್ದಾರೆ.
ಹೆಚ್ಐವಿ ಸೋಂಕಿನಿಂದ ತಂದೆ ತಾಯಿ ಕಳೆದುಕೊಂಡವರಿಗೆ ಬದುಕುವ ಭರವಸೆ ತುಂಬಿದ್ದಾರೆ. ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಅವರಿಗೆ ಮನದಟ್ಟು ಮಾಡಿದ್ದಾರೆ. ಸ್ವಾವಲಂಬಿಯಾಗಿ ಬದುಕುವಂತೆ ಪ್ರೇರೇಪಿಸಲು ಮೇ 1, 2016ರಂದು ಆಶ್ರಯ ಫೌಂಡೇಶನ್ ಸ್ಥಾಪಿಸಿದ್ದಾರೆ. ಸದ್ಯ ಬೆಳಗಾವಿ ಮಹಾಂತೇಶ ನಗರದ ಬಾಡಿಗೆ ಮನೆಯಲ್ಲಿ 18 ಸೋಂಕಿತರು ಅವರ ಬಳಿ ಆಶ್ರಯ ಪಡೆದಿದ್ದಾರೆ.
ಸೋಂಕಿತರಿಗೆ ಮದುವೆ ಮಾಡಿಸಿದ ಮಹಿಳೆ: ಇಲ್ಲಿಂದ 20 ಜನ ಸೇವೆ ಪಡೆದು ಹೊರ ಹೋಗಿದ್ದು, ಅದರಲ್ಲಿ 12 ಜನರಿಗೆ ಮದುವೆಯನ್ನೂ ಮಾಡಿಸಿದ್ದಾರೆ. ಅಲ್ಲದೇ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಸೋಂಕಿತರಿಗೆ ರೋಗದ ಕುರಿತು ಅರಿವು ಮೂಡಿಸಿದ್ದಾರೆ. ಪಾಶ್ ಕಾಯ್ದೆ ಸೇರಿ ಮತ್ತಿತರ ಕಾನೂನುಗಳ ಬಗ್ಗೆಯೂ ಎಲ್ಲೆಡೆ ಮಾಹಿತಿ ನೀಡುತ್ತಿದ್ದಾರೆ. ಇನ್ನು ಜೀವನೋಪಾಯ ತರಬೇತಿ ಕುರಿತು 25 ಕಾರ್ಯಕ್ರಮ ಆಯೋಜಿಸಿದ್ದು, ಅದರಲ್ಲಿ 600ಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಯಾಗಲು ಸಹಾಯ ಮಾಡಿದ್ದಾರೆ. 11 ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ 3 ಸಾವಿರಕ್ಕೂ ಹೆಚ್ಚು ಸೋಂಕಿತರಿಗೆ ಆರೋಗ್ಯ ಸೇವೆ ಕಲ್ಪಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ: ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕನ್ನಡ ಸ್ಟಾರ್ ನಟಿಯರು
ಈಟಿವಿ ಭಾರತ ಜೊತೆ ಮಾತನಾಡಿದ ಮಹಿಳಾ ಸಾಧಕಿ, ಇಡೀ ರಾಜ್ಯದಲ್ಲಿ ಹೆಚ್ಐವಿ ಸೋಂಕಿತರಿಗೆ ಇರುವ ಏಕೈಕ ಆರೈಕೆ ಕೇಂದ್ರ ನಮ್ಮದು. ಸಮಸ್ಯೆ ಇದ್ದವರ ಸಮಸ್ಯೆ ಆಲಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ. ಕಳೆದ 7 ವರ್ಷಗಳಿಂದ ದಾನಿಗಳ ಸಹಾಯದಿಂದ ಆಶ್ರಯ ಫೌಂಡೇಶನ್ ಮೂಲಕ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲೇಜು, ಕೆಎಸ್ಆರ್ಪಿ ಘಟಕ ಸೇರಿ ವಿವಿಧೆಡೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ಸೋಂಕಿನ ಬಗ್ಗೆ ಅರಿವು ಮೂಡಿಸಿದ್ದೇನೆ. ಈ ಸೋಂಕಿನ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಕೊರತೆಯಿದೆ.
ಸೋಂಕಿತರಿಗೂ ಎಲ್ಲರಂತೆ ಬದುಕುವ, ಮದುವೆ ಆಗುವ, ಮಕ್ಕಳನ್ನು ಹೆರುವ ಹಕ್ಕಿದೆ. ಹಾಗಾಗಿ, ಸೋಂಕಿತ ಪುರುಷ - ಮಹಿಳೆಯರಿಗೆ ಮದುವೆ ಆಗುವ ವ್ಯವಸ್ಥೆ ಕಲ್ಪಿಸಬೇಕಿದೆ. ಆ ದೃಷ್ಟಿಯಿಂದ ಮ್ಯಾರೇಜ್ ಬ್ಯುರೋ ಆರಂಭಿಸಿದ್ದೇವೆ. ಇನ್ನು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ನೀವೂ ಬದುಕಿ, ಹೆಚ್ಐವಿ ಸೋಂಕು ಸೇರಿ ಇನ್ನಿತರ ಸಮಸ್ಯೆ ಇದ್ದವರನ್ನು ಬದುಕಲಿ ಬಿಡಿ ಎಂದು ಕೇಳಿಕೊಂಡರು. ಮಹಿಳೆ ಮತ್ತು ಅವರ ಪತಿಗೆ ಸೋಂಕು ತಗುಲಿತ್ತು. ಇದರಿಂದಾಗಿ 2013ರಲ್ಲಿ ಅವರ ಪತ್ನಿ ಮೃತಪಟ್ಟಿದ್ದಾರೆ.
ಪ್ರಶಸ್ತಿ: ಇವರ ದಣಿವರಿಯದ ಸೇವೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕರ್ನಾಟಕ ಸರ್ಕಾರದಿಂದ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ, ಜಿಎಸ್ಟಿ ವುಮೆನ್ ಅಚಿವರ್ ಪ್ರಾದೇಶಿಕ ಅವಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿ ಮತ್ತಿತರ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಒಟ್ಟಿನಲ್ಲಿ ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಇಂಥ ದಿಟ್ಟ ಸಾಮಾಜಿಕ ಕಾರ್ಯಕರ್ತೆಗೆ ಸರ್ಕಾರ ಮತ್ತಷ್ಟು ನೆರವು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಧಾರವಾಡ ಜಿಲ್ಲಾ ಇತಿಹಾಸದಲ್ಲೇ ಮೊದಲು: ಡಿಸಿ, ಜಡ್ಜ್ ಸೇರಿ ಜಿಲ್ಲಾ ಮಟ್ಟದ ಎಲ್ಲ ಹುದ್ದೆಗಳಲ್ಲೂ ಮಹಿಳೆಯರೇ!