ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮನೆಯೊಂದರ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ ಕೊಲ್ಲೂರು ಸಮೀಪದ ಬಾಳೆಗದ್ದೆ ಸೊಸೈಟಿಗುಡ್ಡೆ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು. ಮೃತ ಮಹಿಳೆಯನ್ನು ಹಳ್ಳಿಬೇರು ನಿವಾಸಿ ಅಂಬಾ (47) ಎಂದು ಗುರುತಿಸಲಾಗಿದೆ.
ಅಂಬಾ ಕೂಲಿ ಕೆಲಸಕ್ಕಾಗಿ ಇಲ್ಲಿನ ವಿಶ್ವನಾಥ ಅಡಿಗ ಎಂಬವರ ಮನೆಗೆ ತೆರಳಿದ್ದರು. ಮಧ್ಯಾಹ್ನದ ಊಟದ ಬಳಿಕ ತಟ್ಟೆ ತೊಳೆಯಲು ಮನೆ ಹಿಂಭಾಗದ ಪ್ರದೇಶಕ್ಕೆ ತೆರಳಿದ್ದಾಗ ಏಕಾಏಕಿ ಗುಡ್ಡ ಕುಸಿದಿದ್ದು, ಅಂಬಾ ಮಣ್ಣಿನಡಿ ಸಿಲುಕಿದ್ದಾರೆ. ಮಹಿಳೆಯನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಕೆಲವೇ ಹೊತ್ತಿನಲ್ಲಿ ಮಣ್ಣಿನ ರಾಶಿ ಸರಿಸಿ ಮೇಲಕ್ಕೆತ್ತಿ ಕುಂದಾಪುರ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಅವರು ಮೃತಪಟ್ಟಿದ್ದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಅಂಬಾ ಅವರು ಕೊಲ್ಲೂರು ಸಮೀಪದ ಕುಗ್ರಾಮ ಹಳ್ಳಿಬೇರು ನಿವಾಸಿಯಾಗಿದ್ದು, ಪುಟ್ಟು ಎಂಬವರ ಪತ್ನಿ. ಇವರಿಗೆ ಮೂವರು ಮಕ್ಕಳಿದ್ದಾರೆ. ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಂದಾಪುರ ಎಸಿ ರಶ್ಮಿ ಎಸ್.ಆರ್., ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್ ಹಾಗೂ ಠಾಣಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಹೊಸನಗರ: ಹಳ್ಳ ದಾಟುವಾಗ ಕಾಲು ಸಂಕದಿಂದ ಬಿದ್ದು ಮಹಿಳೆ ಸಾವು - Woman Falls Off Bridge Died