ಬೆಳಗಾವಿ: ಜಾರಕಿಹೊಳಿ ಕುಟುಂಬದ ಕುಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಲೋಕಸಭೆ ಅಖಾಡಕ್ಕೆ ಧುಮುಕಿದ್ದಾರೆ. ಈ ಚುನಾವಣೆಯನ್ನು ಜಾರಕಿಹೊಳಿ ಕುಟುಂಬ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಅಕ್ಕನ ಗೆಲುವಿಗೆ ರಾಹುಲ್ ಜಾರಕಿಹೊಳಿ ಚಿಕ್ಕಪ್ಪನ ಸಹಕಾರದ ಮೊರೆ ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ಸದ್ಯ ಜಾರಕಿಹೊಳಿ ಬ್ರದರ್ಸ್ ಪೈಕಿ ನಾಲ್ವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಜಾರಕಿಹೊಳಿ ಮನೆತನದ ಮಾಸ್ಟರ್ ಮೈಂಡ್. ಹಿರಿಯ ಸಹೋದರ ಮಾಜಿ ಸಚಿವ, ಹಾಲಿ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ, ಮತ್ತೋರ್ವ ಸಹೋದರ ಮಾಜಿ ಸಚಿವ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಇನ್ನೋರ್ವ ಸಹೋದರ ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇನ್ನು ಭೀಮಶಿ ಜಾರಕಿಹೊಳಿ ಸದ್ಯ ಯಾವುದೇ ರಾಜಕೀಯ ಅಧಿಕಾರದಲ್ಲಿಲ್ಲ. ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಲ್ಲೂ ತಮ್ಮದೇ ಹಿಡಿತ ಹೊಂದಿರುವ ಜಾರಕಿಹೊಳಿ ಕುಟುಂಬ ರಾಜ್ಯದಲ್ಲೂ ಶಕ್ತಿಶಾಲಿ ಕುಟುಂಬವಾಗಿ ಹೊರಹೊಮ್ಮಿದೆ.
ಚಿಕ್ಕೋಡಿ ಕಣದಲ್ಲಿ ಸತೀಶ ಜಾರಕಿಹೊಳಿ ಪುತ್ರಿ: ಇಲ್ಲಿಯವರೆಗೂ ಜಾರಕಿಹೊಳಿ ಸಹೋದರರಷ್ಟೇ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದರು. ಈವರೆಗೆ ಅವರ ಮಕ್ಕಳು ಯಾವುದೇ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಚಿಕ್ಕೋಡಿ ಲೋಕಸಭೆಯಿಂದ ಕಣಕ್ಕಿಳಿದಿದ್ದಾರೆ. ಹಾಗಾಗಿ, ಅವರಿಗೆ ಇದು ಪ್ರತಿಷ್ಠೆಯಾಗಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಪ್ರಿಯಾಂಕಾ ಪರವಾಗಿ ತಂದೆ ಮತ್ತು ಸಹೋದರ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ. ಅದರ ಭಾಗವಾಗಿ ಅಕ್ಕ ಪ್ರಿಯಾಂಕಾ ಸ್ಪರ್ಧೆಯ ಬಗ್ಗೆ ಚಿಕ್ಕಪ್ಪನ ಜೊತೆಗೆ ರಾಹುಲ್ ಚರ್ಚಿಸಿದ್ದಾರೆ. ಗೋಕಾಕಿನಲ್ಲಿರುವ ಲಖನ್ ಜಾರಕಿಹೊಳಿ ಗೃಹ ಕಚೇರಿಗೆ ಭೇಟಿ ನೀಡಿ ಪ್ರಚಾರಕ್ಕೆ ಆಗಮಿಸುವಂತೆ ರಾಹುಲ್ ಮನವಿ ಮಾಡಿಕೊಂಡಿದ್ದಾರೆ. ರಾಹುಲ್ ಮನವಿಗೆ ಲಖನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಲಖನ್ ಜಾರಕಿಹೊಳಿ ಈವರೆಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಹಾಗಾಗಿ, ಅಣ್ಣನ ಮಗಳ ಪರವಾಗಿ ಪ್ರಚಾರಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಕೆಂಪು (ಡೆಂಜೆರ್) ಲೈಟ್ ಹತ್ತಿರೋದು ಗೊತ್ತಾಬೇಕಲ್ವಾ ಅವರಿಗೆ ಎನ್ನುವ ಮೂಲಕ ತಮ್ಮ ವಿರೋಧಿಗಳಿಗೆ ಲಖನ್ ಜಾರಕಿಹೊಳಿ ಖಡಕ್ ಸಂದೇಶ ಕೊಟ್ಟರಾ ಎಂಬ ಅನುಮಾನ ಮೂಡಿದೆ. ರಾಹುಲ್ ಭೇಟಿ ವೇಳೆ ಲಖನ್ ಒಗಟು ಒಗಟಾಗಿ ಮಾತಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲೆಲ್ಲಿ ಫಂಡ್ ಹಾಕಿದ್ದಿವೋ ಅಲ್ಲಲ್ಲಿ ಫೋನ್ ಮಾಡಿ ಹೇಳಿ ಅವರಿಗೆ. ಎಲ್ಲವನ್ನೂ ಲಿಸ್ಟ್ ಮಾಡಿ ಇಟ್ಟಿದ್ದೇವೆ ಎಂದು ಬೆಂಬಲಿಗ ಓರ್ವ ಹೇಳಿದ್ದು ವೈರಲ್ ಆಗಿದೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ಗಟ್ಟಿ ಸಂದೇಶ ರವಾಣಿಸಲು ಜಾರಕಿಹೊಳಿ ಬ್ರದರ್ಸ್ ಸಜ್ಜಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ತಮ್ಮ ರಾಜಕೀಯ ಶಕ್ತಿ ಓರೆಗೆ ಹಚ್ಚಲು ಜಾರಕಿಹೊಳಿ ಸಹೋದರರು ಸಜ್ಜಾಗುತ್ತಾರಾ? ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ಪರ ಲಖನ್ ಪ್ರಚಾರ ಮಾಡಿದ್ದರು. ಈಗ ಅಣ್ಣನ ಮಗಳು ಕಾಂಗ್ರೆಸ್ನ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರಕ್ಕೆ ಧುಮುಕುವ ಸಾಧ್ಯತೆಯಿದೆ. ಯಾಕೆಂದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್ಗೆ ಪ್ರಿಯಾಂಕಾ ಪರವಾಗಿ ಪ್ರಚಾರ ಮಾಡಲು ಯಾವುದೇ ಸಮಸ್ಯೆ ಆಗೋದಿಲ್ಲ.
ರಮೇಶ, ಬಾಲಚಂದ್ರ ನಡೆ ನಿಗೂಢ: ಬಿಜೆಪಿಯಲ್ಲಿರುವ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಮಾಡುತ್ತಾರಾ? ಅಥವಾ ಸೈಲೆಂಟ್ ಆಗಿದ್ದುಕೊಂಡೆ ಸಹೋದರನ ಪುತ್ರಿ ಪ್ರಿಯಾಂಕಾ ಗೆಲುವಿಗೆ ಶ್ರಮಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ರಾಜೀನಾಮೆ: ಶೆಟ್ಟರ್ ಭವಿಷ್ಯ - Jagadish Shettar