ದಾವಣಗೆರೆ: ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ತುಂಗಭದ್ರಾ ನದಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ತಟದಲ್ಲಿ ಹರಿಯುವ ತುಂಗಭದ್ರಾ ನದಿಯ ದಂಡೆಯಲ್ಲಿ ಈ ಗ್ರಾಮದ ಕೆಲ ಸಮುದಾದವರು ಸಾವನಪ್ಪಿದ್ರೇ ಅಂತ್ಯಕ್ರಿಯೆ ನಡೆಸುತ್ತಿದ್ದರು. ಅದ್ರೇ ಇದೀಗ ನದಿಯಲ್ಲಿ ನೀರು ಹೆಚ್ಚಿರುವುದರಿಂದ ಗ್ರಾಮಸ್ಥರಿಗೆ ಸೇರಿದ ಪುಟ್ಟ ಸ್ಮಶಾನ ಜಲಾವೃತವಾಗಿದೆ.
ದುರಂತ ಎಂದ್ರೇ ಈ ಗ್ರಾಮದಲ್ಲಿ ಮಳೆಗಾಲದಲ್ಲಿ ಯಾರೇ ಸಾವನ್ನಪ್ಪಿದ್ರು ಕೂಡ ಅಂತ್ಯಕ್ರಿಯೆ ನಡೆಸುವುದೇ ಯಕ್ಷಪ್ರಶ್ನೆಯಾಗಿದೆ. ಮಳೆಗಾಲದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿದ್ರೇ ಕೆಲ ಸಮುದಾಯವರು ನದಿ ನೀರಿನಲ್ಲೇ ಶವ ಹೊತ್ತು ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಇದೆ.
ಮೃತರ ಸಂಬಂಧಿಕರು ಹೇಳಿದ್ದೇನು?: ಇತ್ತೀಚಿಗೆ ಮಂಜಪ್ಪ ಎಂಬುವರು ಮೃತಪಟ್ಟಿದ್ದರು. ಅವರ ಮೃತ ದೇಹವನ್ನು ಹೊಳೆಯಲ್ಲಿ ಹೊತ್ತೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ನದಿ ತಟದಲ್ಲಿ ಗೌಡ್ರು ಕೊಟ್ಟಿರುವ ಸ್ವಲ್ಪ ಜಾಗದಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದೇವೆ. ಮಳೆಗಾಲದ ಸಂದರ್ಭದಲ್ಲಿ ಊರಿನಲ್ಲಿ ಯಾರಾದ್ರೂ ಸಾವನಪ್ಪಿದ್ರೆ ಸಮಸ್ಯೆ ಎದುರಾಗಲಿದೆ. ಒಂದು ವೇಳೆ ಪ್ರವಾಹ ಅಥವಾ ನೀರು ಜಾಸ್ತಿ ಹರಿದು ಬಂದ್ರೆ ಶವಕ್ಕೆ ಕಲ್ಲು ಕಟ್ಟಿ ಹಾಕುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜನ ಆಗಿಲ್ಲ ಎಂದು ಮೃತರ ಸಂಬಂಧಿಕರು ದೂರಿದ್ದಾರೆ.
ಇಂದಿಗೂ ಇದೆ ದಯನೀಯ ಪರಿಸ್ಥಿತಿ: ಗುರುವಾರ ಗುತ್ತೂರು ಗ್ರಾಮದ ಮಂಜಪ್ಪ ಸಾವನ್ನಪ್ಪಿದ್ದರು. ಅವರ ಶವಸಂಸ್ಕಾರಕ್ಕೆ ಸಂಬಂಧಿಕರೆಲ್ಲಾ ಊರಿಗೆ ಬಂದು ಅಂತಿಮ ದರ್ಶನ ಏನೋ ಪಡೆದರು. ಆದರೆ ಸಂಜೆಯಾಗುತ್ತಿದ್ದಂತೆ ಶವ ಸಂಸ್ಕಾರ ಮಾಡುವುದು ಎಲ್ಲಿ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡಿತ್ತು. ಏಕೆಂದರೆ ಅಂತ್ಯಸಂಸ್ಕಾರ ಮಾಡುವ ಜಾಗದಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಸ್ಮಶಾನ ಮುಳುಗಡೆಯಾಗಿತ್ತು.
ಶವ ಸಂಸ್ಕಾರ ಮಾಡಲು ನದಿಯನ್ನು ದಾಟಿ ಮತ್ತೊಂದು ಬದಿಗೆ ಹೋಗಬೇಕಾಗಿತ್ತು. ಕೊನೆಗೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಮಂಜಪ್ಪನವರ ಮೃತದೇಹವನ್ನು ತುಂಗಭದ್ರಾ ನದಿಯಲ್ಲಿ ಹೊತ್ತು ಮತ್ತೊಂದು ಬದಿಗೆ ಹೋಗಿ ಹರಸಾಹಸ ಪಟ್ಟು ಅಂತ್ಯ ಸಂಸ್ಕಾರ ಮಾಡಿದ್ದರು.
ನದಿ ದಂಡೆಯಲ್ಲೇ 60-70 ವರ್ಷಗಳಿಂದ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ನಮ್ಮ ಮಾವನವರು ಸಾವನಪ್ಪಿದ್ರು. ಹೊಳೆ ಹೆಚ್ಚು ಬಂದಿದ್ದರಿಂದ ನೀರಲ್ಲೇ ಮೃತದೇಹವನ್ನು ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ನಮಗೆ ಸ್ಮಶಾನ ಬೇಕು ಎಂದು ಮೃತರ ಸಂಬಂಧಿ ನಾಗರಾಜ್ ಮನವಿ ಮಾಡಿದ್ದಾರೆ.
ಊರಿನ ಗೌಡರು ನೀಡಿದ್ದ ಜಾಗದಲ್ಲಿ ಶವ ಸಂಸ್ಕಾರ: ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಕೆಲ ಸಮುದಾಯದವರಿಗೆ ಸ್ಮಶಾನವಿಲ್ಲದಂತಾಗಿದೆ. ಊರಿನ ಗೌಡರು ನೀಡಿದ್ದ, ಅದು ನದಿ ತಟದಲ್ಲಿರುವ ಎರಡು ಗುಂಟೆ ಜಾಗದಲ್ಲಿ ಹಲವು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ತುಂಗಭದ್ರಾ ನದಿ ಉಕ್ಕಿ ಹರಿದ್ರೆ ಅಂತ್ಯ ಸಂಸ್ಕಾರ ಮಾಡುವುದು ಕಷ್ಟಸಾಧ್ಯವಾಗಲಿದೆ. ಶವ ಸಂಸ್ಕಾರಕ್ಕೆ ಉತ್ತಮವಾದ ಸ್ಥಳ ನಿಗದಿ ಪಡಿಸುವಂತೆ ಸಾಕಷ್ಟು ಬಾರಿ ಹರಿಹರ ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮೃತರ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಮಶಾನಕ್ಕೆ ಹೋಗುವ ದಾರಿ ಕೂಡ ಕೆಸರು ಗದ್ದೆಯಂತಾಗಿದ್ದು, ಕೂಡಲೇ ಶವಸಂಸ್ಕಾರಕ್ಕೆ ಜಾಗ ನೀಡುವಂತೆ ದಲಿತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಓದಿ: ದಾವಣಗೆರೆ: ನದಿಯಲ್ಲಿ ಮೃತದೇಹ ಹೊತ್ತು ಶವಸಂಸ್ಕಾರ ಮಾಡಿದ ಗ್ರಾಮಸ್ಥರು - Villagers Carried Deadbody in River