ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ಕೊಡುವುದಕ್ಕೆ ಆಗ್ರಹಿಸುತ್ತಿರುವ ಬಿಜೆಪಿ, ಜೆಡಿಎಸ್ಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಮೈತ್ರಿ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೆ ಸಿಬಿಐ ಬಗ್ಗೆ ಬಿಜೆಪಿಯವರು ಏನು ಹೇಳಿದ್ರು ಗೊತ್ತಾ?. ಸಿಬಿಐ ಅಂದ್ರೆ ಕರಪ್ಶನ್ ಬ್ಯೂರೋ ಆಫ್ ಇನವೆಸ್ಟಿಗೇಷನ್ ಅಂತ ಹೇಳಿದ್ರು. ಹಿಂದೆ ಅವರ ಸರಕಾರ ಇದ್ದಾಗ ನಾವು ಎಷ್ಟು ಸಾರಿ ಕೇಳಿದ್ದೇವೆ ಸಿಬಿಐಗೆ ಕೊಡಿ ಅಂತ. ಯಾವತ್ತಾದ್ರೂ ಒಂದು ಪ್ರಕರಣ ಸಿಬಿಐಗೆ ಕೊಟ್ಟಿದ್ರಾ ಅವರು? ಎಂದು ಪ್ರಶ್ನಿಸಿದರು.
ಹಿಂದೆ ನಾನು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆನು. ಆ ಕೇಸ್ ಗಳಲ್ಲಿ ಏನಾಯ್ತು?. ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ಯಾಕೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ ಇವರಿಗೆ?. ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬು. ದೇವರಾಜೇಗೌಡ ಅರೆಸ್ಟ್ ಮಾಡಿರೋದು ಸಂತ್ರಸ್ತೆಯ ದೂರಿನ ಮೇಲೆ. ನಾವು ಪೊಲೀಸ್ ತನಿಖೆಯಲ್ಲಿ ಮಧ್ಯಪ್ರವೇಶ ಮಾಡ್ತಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಸಿಎಂ ತಿಳಿಸಿದರು.
ಎಸ್ಐಟಿ ತನಿಖೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜವಾಬ್ದಾರಿಯಿಂದ ಮಾತನಾಡಲಿ. ಪರೇಶ್ ಮೆಸ್ತಾ ಕೇಸಲ್ಲಿ ಏನ್ರಿ ಆಯ್ತು?. ಸಿಬಿಐಗೆ ಕೊಟ್ಟ ಮೇಲೆ ಏನಾಯ್ತು ಆ ಕೇಸ್?. ಬಿಜೆಪಿಯರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಎಸ್ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಸಿಎಂ ಹೇಳಿದರು.
ರಾಹುಲ್ ಗಾಂಧಿಯಿಂದ ಬಹಿರಂಗ ಚರ್ಚೆಗೆ ಸವಾಲು ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮಗೆ ಕಾಂಗ್ರೆಸ್ನವರಿಗೆ ಧೈರ್ಯ ಇದೆ. ಆತ್ಮಸ್ಥೈರ್ಯ ಇದೆ. ಯಾಕಂದ್ರೆ ನಾವು ಸತ್ಯ ಹೇಳುತ್ತೇವಲ್ಲ. ಅದಕ್ಕೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇವೆ ಎಂದರು.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ವಿಚಾರಣೆ ಅಗತ್ಯ: ಬೊಮ್ಮಾಯಿ - Prajwal Revanna Sex Scandal