ಬೆಂಗಳೂರು: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಕೃಷಿ ಇಲಾಖೆಗೆ ಹಲವು ಶಿಫಾರಸುಗಳನ್ನು ಮಾಡಿದೆ. ಕೃಷಿ ಇಲಾಖೆಯು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಕೆಲವು ಹಳ್ಳಿಗಳಲ್ಲಿ ಜನರಿಗೆ ಈಗಲೂ ಹಳೇ ಪದ್ಧತಿಯ ವ್ಯವಸಾಯ ಮಾಡುತ್ತಿದ್ದು, ಹೊಸ ಪದ್ಧತಿಯ ವ್ಯವಸಾಯದ ಮಾಹಿತಿ ಇರುವುದಿಲ್ಲವೆಂದು ಮತ್ತು ಜಾಹೀರಾತಿಗಾಗಿ ಖರ್ಚು ಮಾಡುವುದರಿಂದ ಕೋಟ್ಯಂತರ ಹಣ ಖರ್ಚಾಗುತ್ತಿದ್ದು, ರೈತರಿಗೆ ಸರಿಯಾಗಿ ಈ ಕುರಿತು ಮಾಹಿತಿಯನ್ನು ತಲುಪಿಸಲು ಸಮಿತಿಯು ಸೂಚಿಸಿದೆ.
ಕೃಷಿಯೇತರ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಮೊತ್ತ ಸರಿಯಾದ ರೀತಿಯಲ್ಲಿ ಪ್ರಯೋಜನಕಾರಿ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಕೆಲವು ಕೃಷಿ ಉತ್ಪನ್ನಗಳನ್ನು ಕೈಗಾರಿಕೆಗಳಿಗೆ ಲಿಂಕ್ ಮಾಡಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಮೂಲಕ ರಫ್ತು ಮಾಡಲು ಅನುಕೂಲ ಮಾಡಿಕೊಡಬೇಕು. ರೈತರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕೆಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.
ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಲಿ: ಯುವಕರು ಬೆಂಗಳೂರು ಅಂತಹ ನಗರದಿಂದ ಹಳ್ಳಿಗೆ ಬಂದು ವ್ಯವಸಾಯ ಮಾಡುತ್ತಿದ್ದಾರೆ. ಬೋರ್‌ವೆಲ್ ಹಾಕಿ 10 ಎಕೆರೆ ಪ್ರದೇಶದಲ್ಲಿ ಡ್ರಿಪ್ ಮಾಡಿ ಕಬ್ಬು ಬೆಳೆಯುತ್ತಿದ್ದಾರೆ. ಅಲ್ಲದೇ ಆಧುನಿಕ ಹೈಟೆಕ್ ಗಾಣ ಮಾಡಿರುವ ಉದಾಹರಣೆಗಳು ಇವೆ. ಇವರು ಬೆಳೆದ ಕಬ್ಬಿಗೆ ಯಾವುದೇ ರಾಸಾಯನಿಕ ಹಾಕದೇ ಸಾವಯವ ಗೊಬ್ಬರ ಹಾಕಿ ಬೆಳೆದಿದ್ದಾರೆ. ಯುವಕರು ಮಾಡಿರುವ ಹೈಟೆಕ್ ಗಾಣದಿಂದ ಬೆಂಗಳೂರಿನ ಮಾರುಕಟ್ಟೆಗೂ ರೀಚ್ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಕೃಷಿ ವಿಷಯವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಬೇಕು. ಯುವಕರು ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಪೌಷ್ಟಿಕ ಆಹಾರವಿಲ್ಲದೇ ಕಡಿಮೆ ಸಂಬಳಕ್ಕಾಗಿ ಮಾಲ್‌ಗಳಲ್ಲಿ, ಗಾರ್ಮೆಂರ್ಟ್ಸ್ಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡಲು ವಲಸೆ ಬರುತ್ತಿರುವುದನ್ನು ತಪ್ಪಿಸಲು ಹಳ್ಳಿಗಳಲ್ಲಿಯೇ ಇದ್ದು, ವ್ಯವಸಾಯ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.
ರಫ್ತು ಬೆಳೆಗಳನ್ನು ಬೆಳೆಯಲು ಉತ್ತೇಜನ: ನೀರು ಬಂದರೆ ಮಾತ್ರ ಕೃಷಿ ಚಟುವಟಿಕೆಗಳನ್ನು ಮಾಡದೇ ನಿಖರವಾದ ಆದಾಯ ಇದೆ ಎಂದು ರಫ್ತು ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕೆಂದು ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್‌ಗಳ ಮುಖಾಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕ್ಷೇತ್ರ ಕಾರ್ಯಗಳನ್ನು ಕಡ್ಡಾಯಗೊಳಿಸಬೇಕೆಂದು ಸಮಿತಿ ಸೂಚಿಸಿದೆ. ಭೂಮಿ ಮತ್ತು ರೈತರನ್ನು ಸರ್ಕಾರದಿಂದ ನೀಡಲಾಗುವುದೆಂದು ಆರ್ಗಾನಿಕ್ ಫಾರ್ಮಿಂಗ್ ಮಾಡಲು ಬಂಡವಾಳದಾರರಿಗೆ ಆಹ್ವಾನಿಸುವುದರ ಮೂಲಕ ಪೌಷ್ಟಿಕ ಆಹಾರವನ್ನು ತಯಾರಿಸಲು ಕ್ರಮವಹಿಸಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿದೆ.
ಬ್ಯಾಕ್ ಲಾಗ್ ಹುದ್ದೆಗಳನ್ನು ಯಾವುದೇ ಕಾರಣ ನೀಡದೇ ಸಮಾಜ ಕಲ್ಯಾಣ ಇಲಾಖೆಯಿಂದ ಗುರುತಿಸಲಾಗಿರುವ ಒಟ್ಟು 16 ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕಾತಿ ನಿಯಮಗಳ ಪ್ರಕಾರ ಕೂಡಲೇ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿರುವ ಸಮಿತಿ, ರೋಸ್ಟರ್ ನಿಗದಿಗೊಳಿಸುವ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಜೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸಿದ್ದಲ್ಲಿ ಯಾವ ಅಧಿಕಾರಿ/ನೌಕರರು ನ್ಯಾಯಾಲಯಕ್ಕೆ ಹೋಗುವ ಪ್ರಮೇಯ ಬರುವುದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಮಿತಿಯ ಸೂಚನೆ ಪ್ರಕಾರ, ಉತ್ಪಾದನೆ ಹೆಚ್ಚಿಸಲು, ಆರ್ಗಾನಿಕ್ ಫಾರ್ಮಿಂಗ್ ಮತ್ತು ಮಾರ್ಕೆಟಿಂಗ್ ಮಾಡಲು ಪ್ರೋತ್ಸಾಹವನ್ನು ನೀಡುವುದಾಗಿ ಇಲಾಖಾಧಿಕಾರಿಗಳು ಸಮಿತಿಗೆ ಭರವಸೆ ನೀಡಿದರು. ಅಲ್ಲದೇ ಗ್ರೂಪ್ ಫಾರ್ಮಿಂಗ್ ಅನ್ನು ಉತ್ತೇಜಿಸಲು ಈಗಾಗಲೇ ವಿಶ್ವ ಬ್ಯಾಂಕ್ ಜೊತೆಗೆ ಚರ್ಚೆಯಾಗಿದ್ದು, ಸುಮಾರು 5-6 ಸಾವಿರ ಕೋಟಿಗಳ ಬಂಡವಾಳ ಹೂಡುತ್ತಿದ್ದಾರೆ. ಫೆಬ್ರವರಿ- 2024ರ ಸಭೆಯಲ್ಲಿ ಚರ್ಚಿಸಲಾಗಿದ್ದು, ಕೃಷಿ ಜೊತೆಗೆ ಕೃಷಿ ವ್ಯಾಪಾರ ಎಂಬ ಪದವನ್ನು ಸೇರಿಸಿ, ರಾಜ್ಯದ ರೈತರಿಗೆ ಕೊಡಬೇಕೆಂದು ಇಲಾಖೆಯಿಂದ ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಇಲಾಖಾಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದ್ದಾರೆ.
ಕಳಪೆ ಬಿತ್ತನೆ ಬೀಜಗಳ ತಡೆಗೆ ಕ್ರಮ: ಇಲಾಖೆಯಿಂದ ಶೇ. 35 ರಷ್ಟು ಬಿತ್ತನೆ ಬೀಜ ಕೋಡಲಾಗುತ್ತಿದ್ದು, ಬಾಕಿ ಶೇ. 65 ರಷ್ಟು ಬಿತ್ತನೆ ಬೀಜಗಳನ್ನು ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿಯವರು ಮಾರಾಟ ಮಾಡುತ್ತಿದ್ದಾರೆ. ಇಲಾಖೆಯಿಂದ ನೀಡಲಾಗುವ ಬಿತ್ತನೆ ಬೀಜಗಳ ಕುರಿತು ಯಾವುದೇ ದೂರುಗಳು ಬಂದಿರುವುದಿಲ್ಲ. ಆದರೆ, ಖಾಸಗಿಯವರು ಈ ರೀತಿ ಕಳಪೆ ಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ನೀಡಿದರೆ ಅಂತಹ ಬಿತ್ತನೆ ಬೀಜಗಳನ್ನು ಸೀಜ್ ಮಾಡಿ ಇಲಾಖೆಯ ವಶಕ್ಕೆ ಪಡೆಯಲಾಗುವುದೆಂದು ಇಲಾಖಾಧಿಕಾರಿಗಳು ಸಮಿತಿಗೆ ವಿವರಿಸಿದ್ದಾರೆ.
ಪಿಎಂಎಫ್‌ಎಂಇ ಯೋಜನೆ: ಪಿಎಂಎಫ್‌ಎಂಇ ಯೋಜಯಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ಮತ್ತು ವಿಮಾನ ನಿಲ್ದಾಣದ ಸಮೀಪದಲ್ಲಿ ಫುಡ್ ಯೂನಿಟ್ ಅನ್ನು ಮಾಡಿದಲ್ಲಿ ರೈತರಿಗೆ ಆಗುವ ಉಪಯೋಗಗಳ ಕುರಿತು ಸಮಿತಿ ಕೇಳಿದ ಮಾಹಿತಿಗೆ ಪಿಎಂಎಫ್‌ಎಂಇ ಯೋಜನೆಯನ್ನು ಭಾರತ ಸರ್ಕಾರದಿಂದ ಸಣ್ಣ ಆಹಾರ ಸಂಸ್ಕರಣೆ ಘಟಕಗಳಿಗಾಗಿ ಮಾಡಲಾಗಿದ್ದು, ಆಯುಕ್ತಾಲಯವನ್ನು ಸ್ಥಾಪನೆ ಮಾಡಲು ಘೋಷಿಸಲಾಗಿರುತ್ತದೆ. ವಿಮಾನ ನಿಲ್ದಾಣದ ಹತ್ತಿರ ಘಟಕವಾದರೆ, ಅಲ್ಲಿಂದ ಬೆಳೆಗಳ ರಫ್ತು ಮಾಡುವ ಕುರಿತು ನುರಿತರಿಂದ ಮತ್ತು ಈಗಾಗಲೇ ಈ ಉದ್ಯಮದಲ್ಲಿರುವವರಿಂದ ರೈತರಿಗೆ ತರಬೇತಿ ನೀಡುವುದರ ಮೂಲಕ ಶಕ್ತಿ ತುಂಬಲು ಕ್ರಮವಹಿಸಲಾಗುತ್ತಿದ್ದು, ಭಾರತ ಸರ್ಕಾರದಿಂದ ಇದಕ್ಕೆ ಉತ್ತೇಜನ ನೀಡಲಾಗುತ್ತಿದೆ. ಆಯುಕ್ತಾಲಯ ಸ್ಥಾಪನೆಯಾದ ನಂತರ ಸರ್ಟಿಫಿಕೇಷನ್, ತಾಂತ್ರಿಕ ಸಲಹೆ, ಸಾಲ ಸಬ್ಸಿಡಿ ಲಿಂಕ್ ಮಾಡಿದ್ದಲ್ಲಿ, ಉಳಿದಂತೆ ನುರಿತ ಎಲ್ಲವನ್ನು ಸರಾಗವಾಗಿ ರೈತರಿಗೆ ಅನುಕೂಲವಾಗುವಂತೆ ಮಾಡಲು ಕ್ರಮವಹಿಸುತ್ತಾರೆಂದು ಇಲಾಖಾಧಿಕಾರಿಗಳು ವಿವರಣೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಆ ಭಾಗದಲ್ಲಿ ಜೋಳದ ಪಾರ್ಕ್ ಮಾಡಲು ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿರುವ ಕಾರಣ ಕೂಡಲೇ ಕ್ರಮ ವಹಿಸುವಂತೆ ಸಮಿತಿಯು ಸರ್ಕಾರಕ್ಕೆ ಸೂಚಿಸುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಹನಿ ನೀರಾವರಿ ಕುರಿತು ಸಮಿತಿಗೆ ವಿವರಿಸಿದ ಇಲಾಖಾಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಪೂರ್ಣ ಅನುದಾನ ಖರ್ಚು ಮಾಡಿರುವುದರಿಂದ ಭಾರತ ಸರ್ಕಾರದಿಂದ ಅಧಿಕವಾಗಿ 300 ಕೋಟಿ ರೂ. ಬಂದಿದ್ದು, ಪ್ರಸ್ತುತ ಕ್ರಿಯಾ ಯೋಜನೆಗಳನ್ನು ರೂಪಿಸಿ ಕೊಟ್ಟಿರುವ ಪ್ರಕಾರ ಸರಬರಾಜು ಆಗುತ್ತಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ 2 ಪ್ರೊಫೆಸರ್ ಹುದ್ದೆಗಳು, ಧಾರವಾಡದಲ್ಲಿ 11ರ ಪೈಕಿ 9 ಹುದ್ದೆಗಳಿಗೆ ಅನುಮತಿ ಲಭಿಸಿದ್ದು, ಪ್ರಸ್ತುತ ಜಾಹೀರಾತನ್ನು ನೀಡಲಾಗಿದೆ. ಮತ್ತು ಇಲಾಖೆಯಲ್ಲಿ ಎ.ಸಿ. ಹಾಗೂ ತಾಲ್ಲೂಕು ಅಧಿಕಾರಿಗಳ ಹುದ್ದೆಗಳು ಭರ್ತಿಯಾಗಿವೆ. ಗ್ರಾಮ ಸಹಾಯಕರ ಹುದ್ದೆ ಭರ್ತಿ ಮಾಡಬೇಕಾಗಿರುತ್ತದೆ. ಈಗಾಗಲೇ ಸುಮಾರು 700 ಹುದ್ದೆಗಳನ್ನು ಮಂಜೂರಾತಿ ಮಾಡಿ, ಫೀಲ್ಡ್‌ಗೆ ಹೋಗಿ ಅವರು ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈಗಾಗಲೇ ಪತ್ರ ವ್ಯವಹಾರ ನಡೆಸಿದ್ದು, ಮುಂದಿನ 6-7 ತಿಂಗಳುಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಇಲಾಖಾಧಿಕಾರಿಗಳು ಸಮಿತಿಗೆ ಮಾಹಿತಿ ಒದಗಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ: ಆಯಾ ಆರ್ಥಿಕ ವರ್ಷಗಳಲ್ಲಿ ಸಂಪೂರ್ಣವಾಗಿ ಅನುದಾನವನ್ನು ಖರ್ಚು ಮಾಡಿರುವುದಿಲ್ಲ. ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡು ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಬೇಕಾಗಿರುತ್ತದೆ. ಮತ್ತು ಪೂರ್ಣ ಖರ್ಚು ಮಾಡದಿದ್ದರೆ ಅನುದಾನವನ್ನು ತಲುಪಿಸದೇ ಈ ಜನಾಂಗಕ್ಕೆ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ಸಮಿತಿಯು ಅಸಮದಾನ ವ್ಯಕ್ತಪಡಿಸಿದೆ.
ಕೃಷಿ ಇಲಾಖೆಯಲ್ಲಿ 2020-21ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಒಟ್ಟು ಬಿಡುಗಡೆಯಾದ ಅನುದಾನದಲ್ಲಿ 1012 ಕೋಟಿ ರೂ. ಖರ್ಚಾಗಿ 32.91 ಕೋಟಿ ರೂ. ಬಾಕಿ ಇದ್ದು, 2021- 22ನೇ ಸಾಲಿನಲ್ಲಿ 816 ಕೋಟಿ ರೂ.ಗಳಲ್ಲಿ 809 ಕೋಟಿ ರೂ.ಖರ್ಚಾಗಿದ್ದು, 6.53 ಕೋಟಿ ರೂ. ಉಳಿಕೆಯಾಗಿದೆ. 2022-23ನೇ ಸಾಲಿನಲ್ಲಿ 839 ಕೋಟಿ ರೂ. ಬಿಡುಗಡೆಯಾಗಿದ್ದು, 832 ಕೋಟಿ ಖರ್ಚಾಗಿ, 7.36 ಕೋಟಿ ರೂ. ಉಳಿಕೆಯಾಗಿದೆ.
2021ರಲ್ಲಿ ಕೇವಲ 65 ಲಕ್ಷ ಮಾತ್ರ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಉಳಿದಿರುತ್ತದೆ. 25ನೇ ಮಾರ್ಚ್ ನಂತರ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಮುಂದಿನ ವರ್ಷಕ್ಕೆ ಮುಂದುವರೆಸಿ, ಎಸ್‌ಎನ್‌ಎ ಅಕೌಂಟ್‌ಗೆ ಹೋಗುತ್ತಿದ್ದು, ಅದಕ್ಕೆ ಅನುಕ್ರಮವಾಗಿ ರಾಜ್ಯ ಸರ್ಕಾರವು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿರುವುದರಿಂದ ಉಳಿಕೆಯಾಗಿರುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೊಡುವ ಅನುದಾನ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ಕೋಟಿ ರೂ. ಕೊಡುತ್ತಿದ್ದರು. ಇಲಾಖೆಯಿಂದ ಅಂತಿಮವಾಗಿ ಬಿಡುಗಡೆಯಾಗುವ ಅನುದಾನವು, ಇಲಾಖೆಯಿಂದ ಗುರುತಿಸಲಾದ ಪರಿಶಿಷ್ಟ ಜಾತಿ ಜನಾಂಗದ ಫಲಾನುಭವಿಗಳ ಸಂಖ್ಯೆಗಿಂತಲೂ ಅಧಿಕವಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದರಿಂದ 77 ಲಕ್ಷ ಮತ್ತು 27 ಲಕ್ಷಗಳು ಸಿಎಸ್ಎಸ್ನಲ್ಲಿ ಉಳಿಕೆಯಾಗಿರುತ್ತದೆ.
ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2020-21ನೇ ಸಾಲಿನಲ್ಲಿ 46.73 ಕೋಟಿ ರೂ. ಬಿಡುಗಡೆಯಾಗಿ 45.91 ಕೋಟಿ ರೂ. ಖರ್ಚಾಗಿರುತ್ತದೆ. 2021-22ನೇ ಸಾಲಿನಲ್ಲಿ 34.21 ಕೋಟಿ ರೂ. ಖರ್ಚಾಗಿದ್ದು, 4.32 ಲಕ್ಷ ಮಾತ್ರ ಉಳಿಕೆಯಾಗಿರುತ್ತದೆ. 2022-23ನೇ ಸಾಲಿನಲ್ಲಿ 97.09 ಕೋಟಿ ರೂ. ಬಿಡುಗಡೆಯಾಗಿ ಪೂರ್ಣ ಖರ್ಚಾಗಿರುತ್ತದೆ. ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನದಲ್ಲಿ ಖರ್ಚಾಗದೇ ಉಳಿಕೆಯಾದ ಅನುದಾನವನ್ನು ಮುಂದಿನ ಸಾಲಿನ ರಾಜ್ಯ ಪರಿಷತ್ತಿನಲ್ಲಿಟ್ಟು ಅನುಮೋದನೆ ಮುಂದಿನ ಆಯವ್ಯಯದಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳಡಿ 35 ಕೋಟಿಗಿಂತಲೂ ಹೆಚ್ಚು ಇದ್ದು, ಅದನ್ನು ಒಬಿ ಎಂದು ಪರಿಗಣಿಸಿ, ಮುಂದಿನ ವರ್ಷದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಹೀಗಿದೆ ಇಂದಿನ ನೀರಿನ ಮಟ್ಟ - Karnataka Dam Water Level