ಬೆಂಗಳೂರು: ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಹಾಗೂ ರಾಜ್ಯ ರಾಜಕಾರಣದಲ್ಲೇ ತೀವ್ರ ಸಂಚಲನ ಮೂಡಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ಡ್ರೈವ್ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಮತ್ತೊಂದೆಡೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಎಚ್.ಡಿ.ರೇವಣ್ಣ ವಿರುದ್ಧ ಪ್ರಕರಣ ದಾಖಲಾದ ಬೆನ್ನಲೇ ಕೆ.ಆರ್.ನಗರದ ಮಹಿಳೆಯನ್ನ ಅಪಹರಣ ಪ್ರಕರಣದಡಿ ರೇವಣ್ಣ ಅವರನ್ನ ಎಸ್ಐಟಿ ಬಂಧಿಸಿ, ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ. ಇದರ ಬೆನ್ನಲೇ ಪ್ರಜ್ವಲ್ ವಿದೇಶದಲ್ಲಿರುವುದರಿಂದ ಬಂಧನಕ್ಕೆ ಹಿನ್ನೆಡೆಯಾಗಿದೆ. ಈ ಮಧ್ಯೆ ಏಳು ದಿನಗಳ ಸಮಯಾವಕಾಶ ನೀಡುವಂತೆ ವಿದೇಶದಲ್ಲಿದ್ದುಕೊಂಡೇ ಮಾಡಿದ ಮನವಿಯನ್ನು ಎಸ್ಐಟಿ ತಿರಸ್ಕರಿಸಿತ್ತು. ಹೀಗಾಗಿ ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೊಟೀಸ್ ನೀಡಲು ಎಸ್ಐಟಿ ಮುಂದಾಗಿದೆ. ಆದ್ರೆ ರೆಡ್ ಕಾರ್ನರ್ ನೊಟೀಸ್ ನೀಡಬೇಕು ಎಂಬ ಒತ್ತಡವೂ ಕೇಳಿಬರುತ್ತಿದೆ. ಹಾಗಾದರೆ ಬ್ಲೂ ಹಾಗೂ ರೆಡ್ ಕಾರ್ನರ್ ನೊಟೀಸ್ಗಳು ಏನನ್ನೂ ಸೂಚಿಸುತ್ತದೆ. ಇಂತಹ ನೊಟೀಸ್ಗಳಲ್ಲಿ ಎಷ್ಟು ವಿಧಗಳಿವೆ ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಇಂಟರ್ ಪೋಲ್ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದೆ. ಭಾರತದಲ್ಲಿ ಸಿಬಿಐ ನೊಡಲ್ ಸಂಸ್ಥೆಯಾಗಿದೆ. ಇದು ದೇಶದ ಗೆರೆ ದಾಟಿ ತಲೆಮರೆಸಿಕೊಳ್ಳುವ ಕ್ರಿಮಿನಲ್ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ವೇದಿಕೆಯಾಗಿದೆ. ಬಹು ಬಗೆಯ ಕ್ರಿಮಿನಲ್ಗಳ ಬಗ್ಗೆ ಅರಿಯಲು, ಬಂಧಿಸಲು ಅಥವಾ ಈ ಬಗ್ಗೆ ಎಚ್ಚರಿಕೆ ಕೊಡಲು ಇಂಟರ್ ಪೋಲ್ ಮೂಲಕ ವಿವಿಧ ನೋಟಿಸ್ ನೀಡಲಾಗುತ್ತದೆ. ನಿರ್ದಿಷ್ಟ ಅಪರಾಧಗಳಿಗೆ ನಿಗದಿತ ಬಣ್ಣದ ನೋಟಿಸ್ನ್ನ ಜಾರಿ ಮಾಡಲಾಗುತ್ತದೆ. ಇಂತಹ ನೋಟಿಸ್ಗಳಲ್ಲಿ ಏಳು ವಿಧಗಳಿವೆ. ಕೆಂಪು, ಹಳದಿ, ನೀಲಿ, ಕಪ್ಪು, ಹಸಿರು, ಕಿತ್ತಳೆ ಹಾಗೂ ನೇರಳ ಕಾರ್ನರ್ ನೋಟಿಸ್ಗಳಿವೆ.
ರೆಡ್ ಕಾರ್ನರ್ ನೊಟೀಸ್ ಎಂದರೇನು ?: ವಾಂಟೆಡ್ ಕ್ರಿಮಿನಲ್ಗಳು ದೇಶದಿಂದ ಪಲಾಯನ ಮಾಡುವ ಸಾಧ್ಯತೆಗಳಿದ್ದರೆ ಅಥವಾ ದೇಶದಿಂದ ವಿದೇಶಕ್ಕೆ ಪರಾರಿಯಾದಾಗ ಆತನನ್ನ ಬಂಧಿಸುವ ಸಲುವಾಗಿ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ನೀಡಿ ಬಂಧಿಸಲು ನೀಡುವ ನೋಟಿಸ್ ಅನ್ನು ರೆಡ್ ಕಾರ್ನರ್ ನೊಟೀಸ್ ಎಂದು ಕರೆಯಲಾಗುತ್ತದೆ.
ಬ್ಲೂ ಕಾರ್ನರ್ ನೋಟಿಸ್: ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ದೇಶದಿಂದ ತಲೆಮರೆಸಿಕೊಂಡಿರುವ ಆರೋಪಿ ವಿಳಾಸ ಹಾಗೂ ಇರುವಿಕೆಯನ್ನ ಪತ್ತೆ ಹಚ್ಚಲು ನೀಡುವುದೇ ಬ್ಲೂ ಕಾರ್ನರ್ ನೊಟೀಸ್. ಸದ್ಯ ಪ್ರಜ್ವಲ್ ರೇವಣ್ಣನಿಗೆ ಈ ನೊಟೀಸ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಗ್ರೀನ್ ಕಾರ್ನರ್ ನೋಟಿಸ್: ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಹಾಗೂ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರ ನೀಡಲು ಬಳಸುವುದೇ ಹಸಿರು ಬಣ್ಣದ ನೊಟೀಸ್.
ಯೆಲ್ಲೋ ನೋಟಿಸ್: ಕಾಣೆಯಾದ ವ್ಯಕ್ತಿಗಳನ್ನ ಪತ್ತೆ ಹಚ್ಚಲು ಈ ನೋಟಿಸ್ ನೀಡಲಾಗುತ್ತದೆ. ಸಾಮಾನ್ಯವಾಗಿ ಅಪ್ರಾಪ್ತರು ಹಾಗೂ ತಮ್ಮನ್ನ ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳಿಗೆ ಹಳದಿ ನೋಟಿಸ್ ಬಳಸಲಾಗುತ್ತದೆ.
ಬ್ಲ್ಯಾಕ್ ನೊಟೀಸ್: ಅಪರಿಚಿತ ವ್ಯಕ್ತಿಗಳು ಮೃತನಾದರೆ ಅವರ ಗುರುತು ಪತ್ತೆ ಹಚ್ಚಲು ಈ ನೊಟೀಸ್ ಜಾರಿಯಾಗುತ್ತದೆ.
ಆರೆಂಜ್ ನೋಟಿಸ್: ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಆದಾಗ ಅಥವಾ ಯಾವುದೇ ಘಟನೆ, ವ್ಯಕ್ತಿ ಅಥವಾ ವಸ್ತುವಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಲು ಆರೆಂಜ್ ನೊಟೀಸ್ ನೀಡಲಾಗುತ್ತದೆ
ಪರ್ಪಲ್ ನೊಟೀಸ್: ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗುವವರು ಬಳಸುವ ಕ್ರಿಮಿನಲ್ ವಿಧಾನಗಳು, ಅಪಾಯಕಾರಿ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡುವುದು ಅಥವಾ ಮಾಹಿತಿ ಕೋರಲು ಪರ್ಪಲ್ ನೊಟೀಸ್ ಜಾರಿ ಮಾಡಲಾಗುತ್ತದೆ.