ಮೈಸೂರು: ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಯುದ್ದ ಪ್ರಾರಂಭ ಮಾಡುವ ಮುನ್ನ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ ಎಂದರು.
ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ಹೋಗಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಚಾರ ಕೈಗೊಂಡಿದ್ದೆವು, ತಾಯಿ ಚಾಮುಂಡಿ ಆಶೀರ್ವಾದ ಮಾಡಿದ್ದಕ್ಕೆ 135 ಸ್ಥಾನ ಗೆದ್ದು ಅಧಿಕಾರ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇತ್ತು. ಅವರು ಮಾಡಿದ ಆಡಳಿತವನ್ನ ಜನ ಮೆಚ್ಚಲಿಲ್ಲ. ಪ್ರಜಾಧ್ವನಿ, ಜನಧ್ವನಿ ಮೂಲಕ ನಾನು ಮತ್ತು ಸಿದ್ದರಾಮಯ್ಯ ಅವರು ಇಡೀ ರಾಜ್ಯ ಪ್ರವಾಸ ಮಾಡಿದ್ದೆವು ಎಂದು ಹೇಳಿದರು.
ಇದಕ್ಕೂ ಮೊದಲು ಬಿಜೆಪಿ ಮುಖಂಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಹೆಚ್.ವಿ.ರಾಜೀವ್, ಮಾಜಿ ಮಹಾಪೌರ ಬಿ.ಎಲ್.ಭೈರಪ್ಪ, ಜೆಡಿಎಸ್‌ನ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜಿ.ಪಂ ಮಾಜಿ ಸದಸ್ಯ ಸದಾನಂದ ಸೇರಿದಂತೆ ಹಲವು ಮುಖಂಡರನ್ನು ಸಿಎಂ ಸಿದ್ದರಾಮಯ್ಯ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್ ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಹೆಚ್.ವಿ. ರಾಜೀವ್ ಮಾತನಾಡಿ, ನನಗೆ ಕಾಂಗ್ರೆಸ್‌ಗೆ ಏಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸ್ವಚ್ಛ ಭಾರತ್, ಪರಿಸರ ಕಾಳಜಿ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಕಳೆದ ಮೂರು ದಶಕಗಳಿಂದ ಸತತವಾಗಿ ಮಾಡಿದರೂ ಬಿಜೆಪಿಯಲ್ಲಿ ಸೂಕ್ತ ಗೌರವ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ಸೇರ್ಪಡೆಯಾದೆ. ಜನ ನೆಮ್ಮದಿಯಿಂದ ಬದುಕುವಂತೆ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ಇದನ್ನು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಜನರಿಗೆ ಆತಂಕ ರಹಿತ ಬದುಕು ಕೊಟ್ಟವರು ಸಿದ್ದರಾಮಯ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹೆಚ್ ವಿ ರಾಜೀವ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರವನ್ನು ಎಸ್.ಟಿ.ಸೋಮಶೇಖರ್ ನನ್ನ ಗಮನಕ್ಕೆ ತಂದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತ ಎಂದಿದ್ದೆ. ಕೆ.ವಿ.ಮಲ್ಲೇಶ್ ನಮ್ಮ ಜೊತೆಯಲ್ಲಿ ಇದ್ದವರು. ಅವರು ಕೂಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೋಮುವಾದಿ ಪಕ್ಷದೊಂದಿಗೆ ಜೆಡಿಎಸ್ ಸೇರಿದ ಹಿನ್ನೆಲೆಯಲ್ಲಿ ಬೇಸತ್ತು ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಹೆಚ್.ಎಂ.ಗಣೇಶ್ ಪ್ರಸಾದ್, ತನ್ವೀರ್ ಸೇಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.