ಬೆಳಗಾವಿ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದುದೇ ಕಿತ್ತೂರು ಸಂಸ್ಥಾನದ ಅಭಿವೃದ್ಧಿಗೆ. ಹಾಗಾಗಿ, ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಶುಕ್ರವಾರ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸೈನಿಕ ಶಾಲೆ ನಿರ್ಮಾಣ ಮಾಡಿದ್ದೇವೆ. ಅದೇ ರೀತಿ ಕಿತ್ತೂರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಒತ್ತಾಯವಿದ್ದು, ಅದನ್ನು ಕೂಡ ಮಾಡಿಕೊಡುತ್ತೇವೆ. ಇನ್ನು ಕಿತ್ತೂರಿಗೆ ಬರಬೇಕಿರುವ ಎರಡ್ಮೂರು ಕಚೇರಿಗಳನ್ನು ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.
ಉಪಚುನಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರ ಮೂರು ಕ್ಷೇತ್ರಗಳಲ್ಲೂ ಖಂಡಿತವಾಗಲೂ ಗೆಲುವು ಸಾಧಿಸುತ್ತೇವೆ ಎಂದು ಇದೇ ವೇಳೆ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಣಿ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ: ಸಿಎಂ ಸಿದ್ದರಾಮಯ್ಯ
ಇದಕ್ಕೂ ಮುನ್ನ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಕಪ್ಪ ಕಾಣಿಕೆ ಏಕೆ ಕೊಡಬೇಕು ಎಂದು ಪ್ರಶ್ನಿಸುವುದರ ಜೊತೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಮೊಟ್ಟಮೊದಲ ಬಾರಿಗೆ ಯುದ್ಧ ಸಾರಿ ಜಯ ಗಳಿಸಿದವರು. ವಿಜಯೋತ್ಸವದ 200ನೇ ವರ್ಷಾಚರಣೆ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಬಾಬಾಸಾಹೇಬ್ ಪಾಟೀಲರ ಒತ್ತಾಯದ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಚನ್ನಮ್ಮನವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದ್ದು ನಮ್ಮ ಸರ್ಕಾರ. ಅದು ಸಿದ್ದರಾಮಯ್ಯ ಸರ್ಕಾರ ಎಂದು ತಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಕೊಂಡಾಡಿದರು.