ಬೆಂಗಳೂರು: "ಸರ್ಕಾರದ ಜಾಗಗಳನ್ನೆಲ್ಲಾ ಮಂಜೂರು ಮಾಡಲಾಗುತ್ತಿದ್ದು, ಸ್ಮಶಾನಕ್ಕೂ ಜಾಗವಿಲ್ಲದೇ ಸರ್ಕಾರ ಭೂಮಿ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಂದು ಪ್ರಶ್ನೋತ್ತರದ ವೇಳೆ ಬಿಜೆಪಿ ಶಾಸಕ ಹರೀಶ್ ಅವರು, "ತಮ್ಮ ಕ್ಷೇತ್ರದಲ್ಲಿ ಹಿಂದೂ ರುದ್ರಭೂಮಿಗಾಗಿ 10.09 ಎಕರೆಯನ್ನು ಮೀಸಲಿಡಲಾಗಿದೆ. ಇದು ತುಂಗಾಭದ್ರಾ ನದಿಯ ದಡದಲ್ಲಿದ್ದು, ಮಳೆ ಬಂದಾಗ ಅರ್ಧ ಭಾಗ ಮುಳುಗಿ ಹೋಗುತ್ತದೆ. ಹೆಚ್ಚುವರಿಯಾಗಿ ಜಾಗ ಗುರುತಿಸಲಾಗಿದ್ದು, ಅದನ್ನು ಶೀಘ್ರವೇ ಸರ್ಕಾರ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು. ಇಲ್ಲವಾದರೆ ರಿಯಲ್ ಎಸ್ಟೇಟ್ ಚಿತಾವಣೆಯಿಂದಾಗಿ ಭೂಮಿ ಕೈತಪ್ಪುವ ಸಾಧ್ಯತೆ ಇದೆ. ಇದಕ್ಕಿಂತಲೂ ಪರ್ಯಾಯ ಜಾಗ ಸೂಕ್ತವಾಗಿಲ್ಲ. ನಗರ ಪ್ರದೇಶದಲ್ಲಿ ಎಕರೆಗೆ 1 ಕೋಟಿ ರೂ. ನೀಡುವುದು, ದೊಡ್ಡ ನಷ್ಟವಲ್ಲ" ಎಂದು ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, "ಈಗಿರುವ ಸ್ಮಶಾನದ ಪಕ್ಕದಲ್ಲೇ 9 ಎಕರೆಯನ್ನು ಗುರುತಿಸಲಾಗಿದೆ. ಮಾರ್ಗಸೂಚಿಯ ಪ್ರಕಾರ 67 ಲಕ್ಷ ರೂ. ಎಕರೆಗೆ ಬೆಲೆ ಇದೆ. ಆದರೆ ರೈತರು 1.20 ಕೋಟಿ ರೂ. ಗಳನ್ನು ಕೇಳುತ್ತಿದ್ದಾರೆ. ಬೆಲೆಯಲ್ಲಿ ಹೊಂದಾಣಿಕೆಯ ಚರ್ಚೆ ಯಶಸ್ವಿಯಾದರೆ, ಅದೇ ಜಾಗ ಖರೀಸುತ್ತೇವೆ. ಇಲ್ಲವಾದರೆ ಪರ್ಯಾಯ ಜಾಗವನ್ನು ಹುಡುಕಿ ಹರಿಹರ ನಗರಕ್ಕೆ ಸ್ಮಶಾನ ಭೂಮಿಯನ್ನು ಒದಗಿಸುತ್ತೇವೆ" ಎಂದು ಭರವಸೆ ನೀಡಿದರು.
ಜಾಗ ಖರೀದಿಸುವ ಪರಿಸ್ಥಿತಿ: "ಇರುವ ಜಾಗಗಳನ್ನೆಲ್ಲಾ ಮಂಜೂರು ಮಾಡಿ ಈಗ ಸ್ಮಶಾನಕ್ಕಾಗಿಯೇ ಜಾಗ ಖರೀದಿಸುವ ಪರಿಸ್ಥಿತಿ ಬಂದಿದೆ. ಕಳೆದ ವರ್ಷ 50 ಕೋಟಿ ರೂ.ಗಳನ್ನು ಸ್ಮಶಾನ ಭೂಮಿ ಖರೀದಿಗಾಗಿ ವೆಚ್ಚ ಮಾಡಲಾಗಿದೆ. ಯಾವುದೇ ಊರಿಗೆ ಹೋದರೂ ಸ್ಮಶಾನಕ್ಕೆ ಜಾಗ ಇಲ್ಲ ಎಂಬ ಮನವಿಗಳು ಸಾಮಾನ್ಯವಾಗಿವೆ. ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಾರಕ್ಕೊಮ್ಮೆ ನ್ಯಾಯಾಲಯದ ಮುಂದೆ ನಿಲ್ಲಬೇಕಾದ ಪರಿಸ್ಥತಿ ಇದೆ" ಎಂದು ಹೇಳಿದರು.
"ಸರ್ಕಾರಿ ಜಾಗ ಖಾಲಿಯಾಗುತ್ತಿರುವುದರಿಂದಾಗಿ ಸ್ಮಶಾನಕ್ಕೆ ಆಟದ ಮೈದಾನ, ಕೆಪಿಟಿಎಸ್‍ಎಲ್‍ನ ಸ್ಟೇಷನ್, ಆಸ್ಪತ್ರೆಗಳಿಗೆ ಸ್ಥಳಗಳಿಲ್ಲ. ಅಂಗನವಾಡಿಗಳಿಗೆ ಜಾಗ ನೀಡುವಂತೆ 12 ಸಾವಿರ ಅರ್ಜಿಗಳಿವೆ. ಮೊನ್ನೆ ಸಿಇಒ ಹಾಗೂ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಯವರು ಇಷ್ಟು ಅರ್ಜಿಗಳಿದ್ದರೂ ಏಕೆ ಜಾಗ ನೀಡುತ್ತಿಲ್ಲ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡರು" ಎಂದು ಸದನಕ್ಕೆ ತಿಳಿಸಿದರು.
"ಇರುವ ಜಾಗವನ್ನು ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಡುವ ಅಗತ್ಯವಿದೆ" ಎಂದು ಹೇಳಿದಾಗ, ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, "ನಗರ ಯೋಜನೆಯ ಸಂದರ್ಭದಲ್ಲಿ ಸ್ಮಶಾನ ಸೇರಿದಂತೆ ಇತರ ನಾಗರಿಕ ಸೌಲಭ್ಯಗಳಿಗೆ ಜಾಗ ಮೀಸಲಿಡುತ್ತಿಲ್ಲ. ಈ ಬಗ್ಗೆ ಸಚಿವರು ಗಮನ ಹರಿಸಬೇಕು" ಎಂದು ಸಲಹೆ ನೀಡಿದರು.
ಇದನ್ನೂ ಓದಿ: ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ: ಎಲ್ಲಾ ಮಾಲ್ಗಳಿಗೂ ಸರ್ಕಾರದಿಂದ ಮಾರ್ಗಸೂಚಿ- ಡಿ.ಕೆ.ಶಿವಕುಮಾರ್ - DK Shivakumar