ಬೆಳಗಾವಿ: ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಇದರ ನಡುವೆ ಯಮಕನಮರಡಿ ವ್ಯಾಪ್ತಿಗೆ ಬರುವ ಏಳು ಹಳ್ಳಿಗಳ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕ್ಷೇತ್ರದಲ್ಲಿ ಏಳು ಹಳ್ಳಿಗಳ ಜನರು ಒಂದೇ ಬಾವಿ ಆಶ್ರಯಿಸಿದ್ದು, ಮಹಿಳೆಯರು, ಮಕ್ಕಳು ಕಿಮೀಗಟ್ಟಲೇ ನಡೆದುಕೊಂಡು ಬಂದು ಇಲ್ಲಿಂದ ಹೊತ್ತೊಯ್ಯುತ್ತಾರೆ.
7 ಗ್ರಾಮಗಳ ದಾಹ ನೀಗಿಸುವ ಬಾವಿ: ಅನೇಕ ಹಳ್ಳಿಗಳಲ್ಲಿ ನಲ್ಲಿಗಳು, ಬೋರ್ ವೆಲ್ಗಳಿಂದ ಜನರಿಗೆ ನೀರಿನ ಸೌಕರ್ಯ ಒದಗಿಸುವುದನ್ನು ಸಹಜ. ಆದರೆ, ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಹೊಸ ವಂಟಮೂರಿ, ಮಲ್ಲಹೊಳಿ, ಜಾರಕಿಹೊಳಿ, ಪರ್ಲಗೋಟ ಸೇರಿ ಏಳು ಊರುಗಳ ಜನ ನೀರು ಕುಡಿಯಲು ಮತ್ತು ಬಳಸಲು ಇರುವ ಒಂದೇ ಬಾವಿ ಆಶ್ರಯಿಸಿದ್ದಾರೆ. ನೀರು ಹೊತ್ತುಕೊಂಡು ಹೋಗಲು ಸರಿಯಾದ ರಸ್ತೆ ಕೂಡ ಇಲ್ಲ. ಕಲ್ಲು, ಮುಳ್ಳುಗಳ ಹಾದಿಯಲ್ಲಿ ಗರ್ಭಿಣಿಯರು, ವೃದ್ಧೆಯರು, ಚಿಕ್ಕಮಕ್ಕಳು ನೀರಿಗಾಗಿ ನಿತ್ಯ ಜೀವವನ್ನೇ ಪಣಕ್ಕಿಡುವ ಸ್ಥಿತಿಯಿದೆ.
![7 ಗ್ರಾಮಗಳ ದಾಹ ನೀಗಿಸುವ ಬಾವಿ](https://etvbharatimages.akamaized.net/etvbharat/prod-images/09-03-2024/20944234_water.jpg)
ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರಕ್ಕೆ ಒಳಪಡುವ ಈ 7 ಗ್ರಾಮಗಳ ಜನರು ಕಳೆದ ಅನೇಕ ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಅನೇಕ ಊರುಗಳಲ್ಲಿ ಮನೆ ಮನೆಗೂ ನಲ್ಲಿಗಳನ್ನು ಜೋಡಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲೂ ಕೂಡ ಆ ಯೋಜನೆಯಡಿ ಒಂದಿಷ್ಟು ಮನೆಗಳಿಗೆ ನಲ್ಲಿಗಳನ್ನು ಜೋಡಿಸಿ ನಾಲ್ಕೈದು ತಿಂಗಳಾಗಿದೆ. ಆದರೆ, ನೀರು ಮಾತ್ರ ಬಂದಿಲ್ಲ. ಜೆಜೆಎಂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಈ ಟಿವಿ ಭಾರತ ಜೊತೆಗೆ ಮಾತನಾಡಿದ ಹೊಸ ವಂಟಮೂರಿ ಮಹಿಳೆ ನಿಂಗವ್ವ ವಣ್ಣೂರೆ, ನೀರು ತೆಗೆದುಕೊಂಡು ಹೋಗುವಾಗ ಕಲ್ಲು, ಮುಳ್ಳು ತುಳಿದು ಬಿದ್ದು ಗಾಯಗೊಂಡರೂ ನಮ್ಮನ್ನು ಯಾರೂ ಕೇಳುವವರಿಲ್ಲ. ಇಲ್ಲಿನ ಶಾಸಕರ ಪಿಎ ಕರೆಸಿ, ತೋರಿಸಿದರೂ ಉಪಯೋಗ ಆಗಿಲ್ಲ. ನಮಗೆ ನೀರು ಕೊಟ್ಟು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
![ಬಾವಿ ನೀರು ಹೊತ್ತೊಯ್ಯುತ್ತಿರುವ ಮಹಿಳೆಯರು](https://etvbharatimages.akamaized.net/etvbharat/prod-images/09-03-2024/20944234_aa.jpg)
ಇದನ್ನೂ ಓದಿ: ನೀರಿನ ಸಮಸ್ಯೆ: ಹೆಚ್ಚು ನೀರು ಬಳಸಿದರೆ ದಂಡ ವಿಧಿಸಲು ಮುಂದಾದ ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು
ಗರ್ಭಿಣಿ ದೀಪಾ ಪೂಜೇರಿ ಮಾತನಾಡಿ, ನಮಗೆ ಎಷ್ಟೇ ಸಮಸ್ಯೆ ಆದರೂ ಈ ಬಾವಿಗೆ ಬಂದು ನೀರು ಹೊತ್ತುಕೊಂಡು ಹೋಗಲೇಬೇಕು. ಅನೇಕ ವರ್ಷಗಳಿಂದ ಇಲ್ಲಿ ನೀರಿನ ಸಮಸ್ಯೆ ಇದೆ. ಮನೆಗೆ ಊರಿಗೆ ಬಂದವರು ನಮ್ಮ ಸ್ಥಿತಿ ನೋಡಿ ನಗುವಂತಾಗಿದೆ. ಸಂಬಂಧಿಕರು ನಮ್ಮ ಊರಿಗೆ ಬರುವುದನ್ನೆ ಬಿಟ್ಟಿದ್ದಾರೆ. ಇದ್ದವರು ರೊಕ್ಕ ಕೊಟ್ಟು ನೀರು ಕೊಂಡುಕೊಳ್ಳುತ್ತಾರೆ. ಆದರೆ, ನಾವು ಬಡವರು, ನಮಗೆ ಈ ಬಾವಿಯೇ ಗತಿ. ಹಾಗಾಗಿ, ನೀರು ಕೊಟ್ಟರೆ ದೊಡ್ಡ ಉಪಕಾರ ಮಾಡಿದಂತಾಗುತ್ತೆ ಎಂದಿದ್ಧಾರೆ.
ಕೆಂಪವ್ವ ಪೂಜೇರಿ ಎಂಬುವವರು ಮಾತನಾಡಿ, ಕೆಲಸಕ್ಕೆ ಹೋಗಿ ಬಂದಾಗ ರಾತ್ರಿ ಹತ್ತು ಗಂಟೆ ಆದ್ರೂ ಕತ್ತಲಿನಲ್ಲೆ ನೀರು ತರಬೇಕು. ಅನಾರೋಗ್ಯಕ್ಕೆ ತುತ್ತಾದಾಗ ಒಂದು ಬ್ಯಾರಲ್ಗೆ 50 ರೂ. ಕೊಟ್ಟು ನೀರು ತೆಗೆದುಕೊಳ್ಳುತ್ತೇವೆ. ದಯವಿಟ್ಟು ನಮ್ಮ ಎಲ್ಲ ಮನೆಗಳಿಗೆ ನಲ್ಲಿಗಳನ್ನು ಜೋಡಿಸಿ ನೀರು ಕೊಡಿ ಎಂದು ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: ಹಾವೇರಿ: ನದಿ ತೀರದ ಗ್ರಾಮದಲ್ಲೇ ಕುಡಿಯುವ ನೀರಿಗೆ ಹಾಹಾಕಾರ; ಗುಂಡಿ ತೋಡಿ ಜಲ ಸಂಗ್ರಹಿಸುತ್ತಿರುವ ಜನ
ಮಲ್ಲಹೊಳಿ ಗ್ರಾಮದ ಯುವಕ ಶಿವಣ್ಣ ಜಮಾಟಿ ಮಾತನಾಡಿ, ಸುತ್ತಲಿನ ಏಳೂರು ಗ್ರಾಮಗಳ ಜನರಿಗೆ ಇದೊಂದೆ ಬಾವಿ ಆಸರೆಯಾಗಿದೆ. ಜನ ಎತ್ತಿನ ಗಾಡಿ, ಸೈಕಲ್, ಬೈಕ್ ಮೇಲೆ ಮತ್ತು ಹೊತ್ತುಕೊಂಡು ನೀರು ಒಯ್ಯುತ್ತಾರೆ. ನಮಗೆ ತುಂಬಾ ನೀರಿನ ಸಮಸ್ಯೆ ಆಗುತ್ತಿದೆ ಎಂದು ವಿವರಿಸಿದರು.
ಈ ಕುರಿತು ಬೆಳಗಾವಿ ತಹಶೀಲ್ದಾರ್ ಸಿದ್ದರಾಯ ಭೋಸಗಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಜಲ್ ಜೀವನ್ ಮಿಷನ್ ಯೋಜನೆಯಡಿ ಈ ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಮಾಡಲು ಸಂಬಂಧಿತ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆ ಆಲಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಖಾಸಗಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ: ದರ ನಿಗದಿ ಮಾಡಿದ ಜಿಲ್ಲಾಡಳಿತ