ದಾವಣಗೆರೆ: ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ. ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ಜಲಾಶಯಕ್ಕೆ ಜೀವ ಕಳೆ ಬಂದಿದ್ದು, ಕೆಲವೇ ದಿನಗಳಲ್ಲಿ ಇಡೀ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ರೈತರಲ್ಲೂ ಆಶಾಕಿರಣ ಮೂಡಿದೆ. ಆದರೆ, ದಾವಣಗೆರೆ ಭಾಗದ ರೈತರು, 'ಕೂಡಲೇ ಐಸಿಸಿ ಸಭೆ ಕರೆದು, ಭತ್ತ ನಾಟಿ ಮಾಡಲು ನಾಲೆಗೆ ನೀರು ಹರಿಸುವಂತೆ' ಒತ್ತಾಯಿಸಿದ್ದಾರೆ. ನೀರು ಹರಿಸದೇ ಇದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟು ಭಾಗದ ಮುಖಂಡರು ರೈತರ ಸಭೆ ನಡೆಸಿದರು. ಭದ್ರಾ ಜಲಾಶಯ ಭರ್ತಿಯಾಗುತ್ತಿರುವುದು ರೈತರಿಗೆ ಶಕ್ತಿ ಬಂದಂತೆ ಆಗಿದೆ. ಸದ್ಯ ಜಲಾಶಯದಲ್ಲಿ ಎರಡು ಬೆಳೆಗಳಿಗೆ ಆಗುವಷ್ಟು ನೀರಿದ್ದು, ಯಾವುದೇ ಕಾರಣಕ್ಕೂ ಆನ್ ಅಂಡ್ ಆಫ್ ಸಿಸ್ಟಮ್ ಮಾಡದೇ ಎರಡು ಬೆಳೆಗಳಿಗೆ, ನಾಲೆಗೆ ನೀರು ಹರಿಸುವಂತೆ ಮನವಿ ಮಾಡಿದರು. ಭತ್ತದ ಬೆಳೆಗಾರರು ನಾಟಿ ಮಾಡಲು ಭದ್ರಾ ನೀರಿಗಾಗಿ ಕಾದು ಕೂತಿದ್ದಾರೆ. ಹಾಗಾಗಿ ತಕ್ಷಣ ಐಸಿಸಿ ಸಭೆ ಕರೆದು ನೀರು ಹರಿಸಬೇಕೆಂದು ಒತ್ತಾಯಿಸಿದರು.
"ನಮಗೆ ಒಂದು ಬೆಳೆಗೆ 31 ಟಿಎಂಸಿ ನೀರು ಬೇಕಾಗಿದೆ. ಬರುವ ನೀರು ಜಲಾಶಯಕ್ಕೆ ಬರುತ್ತಿದೆ. ಆನ್ ಅಂಡ್ ಆಫ್ ಸಿಸ್ಟಮ್ ಒಪ್ಪುವುದಿಲ್ಲ. ಎರಡು ಬೆಳೆ ಬೆಳೆಯುವಷ್ಟು ನೀರು ಡ್ಯಾಂನಲ್ಲಿದೆ. ಕಳೆದ ಬೇಸಿಗೆಯಲ್ಲಿ ನೀರು ಇತ್ತು. ಆದರೆ, ದುರುಪಯೋಗ ಪಡಿಸಿಕೊಂಡರು" ಎಂದು ಎಸ್.ಎ ರವೀಂದ್ರನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಎಚ್ಚರಿಕೆ: "ಭದ್ರಾ ಜಲಾಶಯದ ರಿವರ್ಸ್ ಸ್ಲೀವ್ನಲ್ಲಿ ನಿತ್ಯ 600 ಕ್ಯೂಸೆಕ್ ನೀರು ಪೋಲಾಗುತ್ತಿದ್ದು, ಕೂಡಲೇ ಅದನ್ನು ದುರಸ್ಥಿ ಮಾಡ್ಬೇಕು. ಅಷ್ಟೇ ಅಲ್ಲದೆ ನೂರು ಅಡಿ ಕೆಳಗೆ ಗ್ರೋಟಿಂಗ್ ಮಾಡಿಸಬೇಕು. ಎಮರ್ಜೆಸ್ಸಿ ಗೇಟ್ ಹತ್ತಿರ ಕಾಂಕ್ರೀಟ್ ಬೆಡ್ ಹಾಕುವ ಜೊತೆಗೆ ನಾಲೆಗಳ ದುರಸ್ಥಿ ಹಾಗೂ ಸೀಲ್ಡ್ ತೆಗೆಯಲು ಕೂಡಲೇ ಸರ್ಕಾರ 100 ರಿಂದ 150 ಕೋಟಿ ಡಿಪಿಆರ್ ಮಾಡಿಸಬೇಕು" ಎಂದು ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದರು. ಐಸಿಸಿ ಸಭೆ ಕರೆದು, ನೀರು ಹರಿಸದೇ ಇದ್ದರೆ, ಜುಲೈ 24ರಂದು ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರ ಒತ್ತಾಯ: "ಆಗಸ್ಟ್ 1ರ ಒಳಗೆ ನಾಲೆಗೆ ನೀರು ಹರಿಸಬೇಕು, ಇಲ್ಲವೇ ಕೂಡಲೇ ಐಸಿಸಿ ಸಭೆ ಕರೆಯಬೇಕು. ಯಾವುದೇ ಕಾರಣಕ್ಕೂ ಶಾಸಕರು ಹೇಳಿದಂತೆ ಕೇಳದೆ ಐಸಿಸಿ ರೈತ ಪ್ರತಿನಿಧಿಗಳು ಡ್ಯಾಂ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದು, ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದರಂತೆ ನಾಲೆಗೆ ನೀರು ಹರಿಸಬೇಕು" ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈದುಂಬಿ ಹರಿಯುತ್ತಿದೆ ತುಂಗಭದ್ರಾ: ನದಿ ಪಾತ್ರದಲ್ಲಿ ಪ್ರವಾಹದ ಭೀತಿ - Tungabhadra is overflowing