ಬೆಂಗಳೂರು: ದೀಪಾವಳಿ ಹಿನ್ನೆಲೆ ನಗರದಲ್ಲಿ ತ್ಯಾಜ್ಯದ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, ಎರಡು ದಿನಗಳಲ್ಲಿ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ದೇವಸಂದ್ರ, ಕೆ.ಆರ್.ಪುರ, ಮಲ್ಲೇಶ್ವರಂ, ಮಡಿವಾಳ ಮತ್ತು ರಸೆಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿದಂತೆ ಪ್ರಮುಖ 12 ಮಾರುಕಟ್ಟೆಗಳಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ.
ಬಹುತೇಕ ಬಡಾವಣೆ, ರಸ್ತೆಗಳು ಪಟಾಕಿ ತ್ಯಾಜ್ಯ, ಬಾಳೆ ಎಲೆಗಳು, ಕುಂಬಳಕಾಯಿ ಹಾಗೂ ಹೂವಿನ ತ್ಯಾಜ್ಯದಿಂದ ತುಂಬಿ ಹೋಗಿವೆ. ಹಬ್ಬದ ಮರುದಿನವೇ ನಗರದಲ್ಲಿ ಕಸ ಹೆಚ್ಚಾಗಿ ಗಬ್ಬೆದ್ದು ನಾರುತ್ತಿದ್ದು, ಎಲ್ಲಿ ನೋಡಿದರೂ ಕಸವೇ ಕಾಣಿಸುತ್ತಿದೆ. ಹಲವೆಡೆ ಹಬ್ಬಕ್ಕೆ ಮಾರಾಟ ಮಾಡಲು ತಂದಿದ್ದ ಬಾಳೆ ಕಂದು, ಮಾವಿನ ಸೊಪ್ಪು, ಹೂವು, ಬೂದುಗುಂಬಳ ಕಾಯಿಗಳನ್ನು ರಸ್ತೆಗಳ ಬದಿಯೇ ಬಿಟ್ಟು ಹೋಗಿದ್ದು, ಅದರ ಜೊತೆ ನಾಗರಿಕರು ಎಸೆದ ಕಸ ಸೇರಿವೆ. ಪೌರ ಕಾರ್ಮಿಕರು ಅಲ್ಪ ಸ್ವಲ್ಪ ತ್ಯಾಜ್ಯ ತೆರವುಗೊಳಿಸಿದ್ದು, ಬಹುತೇಕ ತ್ಯಾಜ್ಯಗಳ ರಾಶಿ ಹಾಗೆಯೇ ಬಿದ್ದಿದೆ.
ಮಲ್ಲೇಶ್ವರ, ಜಯನಗರ, ಬನಶಂಕರಿ, ಸಾರಕ್ಕಿ, ಬಸವನಗುಡಿ, ಗಾಂಧಿಬಜಾರ್, ಹೆಬ್ಬಾಳ, ಯಲಹಂಕ, ಮತ್ತಿಕೆರೆ, ಜಾಲಹಳ್ಳಿ, ದಾಸರಹಳ್ಳಿ ಸೇರಿದಂತೆ ಹಲವು ರಸ್ತೆಗಳಲ್ಲಿ ಬ್ಲಾಕ್‌ಸ್ಪಾಟ್‌ಗಳು ನಿರ್ಮಾಣವಾಗಿವೆ. ನಗರದಲ್ಲಿ ನಿತ್ಯ ಸುಮಾರು 3 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಇದರ ಪ್ರಮಾಣ ದುಪ್ಪಟ್ಟಾಗಿದೆ. ಹಬ್ಬದ ದಿನಗಳಂದು ಕಸ ವಿಲೇವಾರಿ ಮಾಡಲು ಪ್ರತ್ಯೇಕ ಮಾರ್ಗಸೂಚಿಯನ್ನು ಬಿಬಿಎಂಪಿ ಇತ್ತೀಚೆಗೆ ಹೊರಡಿಸಿತ್ತು. ಆದರೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಹಾದಿ ಬೀದಿಯಲ್ಲಿ ಕಸ ಎಸೆಯುತ್ತಿದ್ರೆ ಜೋಕೆ!: ಇನ್ಮುಂದೆ ನಿಮ್ಮ ಮೇಲೆ 'ಮಾರ್ಷಲ್'ಗಳ ನಿಗಾ