ಬೆಂಗಳೂರು/ಬೆಳಗಾವಿ ಸುವರ್ಣವಿಧಾನಸೌಧ: ಬೆಳಗಾವಿಯ ಅಧಿವೇಶನದ ಮೊದಲ ದಿನವೇ ವಕ್ಫ್ ಆಸ್ತಿ ವಿಚಾರ ಪ್ರತಿಧ್ವನಿಸಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚನಾ ನಿರ್ಣಯ ಮಂಡಿಸಿದ ನಂತರ ಸಭಾಧ್ಯಕ್ಷರ ಪೀಠ ನವೀಕರಣ ಮಾಡಿರುವ ಬಗ್ಗೆ ತಿಳಿಸಿದರು. ಬಳಿಕ ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪದ ವರ್ಣಚಿತ್ರ ಪ್ರತಿಷ್ಠಾಪಿಸಿರುವ ಕುರಿತು ಸದನಕ್ಕೆ ಮಾಹಿತಿ ನೀಡುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಕ್ಫ್ ವಿಚಾರದ ಬಗ್ಗೆ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ಕೊಡಬೇಕು. ನೀವು ಅನುಭವ ಮಂಟಪದ ವಿಚಾರ ಪ್ರಸ್ತಾಪಿಸುತ್ತಿರುವುದರಿಂದ ಆ ವಿಚಾರದ ಬಗ್ಗೆ ಚರ್ಚೆ ನಡೆಯುತ್ತದೆ. ಇದರಿಂದ ನಾವು ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾವನೆ ಮಂಡನೆ ಮಾಡಲು ತಡವಾಗುತ್ತದೆ ಎಂದು ಹೇಳಿದರು.
ಆಗ ಆಡಳಿತ ಪಕ್ಷದ ಕಡೆಯಿಂದ ಹಲವು ಶಾಸಕರು, ಸಚಿವರಾದ ಕೃಷ್ಣಬೈರೇಗೌಡ, ಡಾ.ಶರಣ ಪ್ರಕಾಶ್ ಪಾಟೀಲ್ ಎದ್ದುನಿಂತು ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ಕೊಡಿ. ಪ್ರಶ್ನೋತ್ತರ ನಡೆಯಲಿ. ನಂತರ ಈ ಬಗ್ಗೆ ಚರ್ಚೆ ನಡೆಸಿ. ಉತ್ತರ ಕೊಡಲು ನಾವು ತಯಾರಿದ್ದೇವೆ ಎಂದಾಗ, ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪ್ರತಿಪಕ್ಷ ನಾಯಕ ಆರ್.ಅಶೋಕ್, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಎದ್ದು ನಿಂತು ವಕ್ಫ್ ವಿಚಾರ ಚರ್ಚೆಗೆ ಅವಕಾಶ ಕೊಡಿ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮನವಿ ಮಾಡಿದರು. ಮಾತು ಮುಂದುವರಿಸಿದ ಅಶೋಕ್, ನೀವು ಇಲ್ಲಿ ಬಸವಣ್ಣನವರ ಅನುಭವ ಮಂಟಪದ ವಿಚಾರ ಪ್ರಸ್ತಾಪಿಸುತ್ತಿದ್ದೀರಿ, ಬಸವಣ್ಣನ ದೇವಾಲಯಗಳೆಲ್ಲಾ ವಕ್ಫ್ ಆಸ್ತಿಗಳಾಗುತ್ತಿವೆ ಎಂದು ಹೇಳಿದ ಬಳಿಕ ಮತ್ತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ ಗದ್ದಲ ಹೆಚ್ಚಾಯಿತು.
ಈ ಗದ್ದಲದ ನಡುವೆಯೇ ಮಾತನಾಡಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಬಿಜೆಪಿ, ಆರ್‌ಎಸ್‌ಎಸ್‌ನವರು ಬಸವಣ್ಣನವರ ವಿರೋಧಿಗಳು. ಬಿಜೆಪಿಯ ಶಾಸಕರೊಬ್ಬರು ಬಸವಣ್ಣನವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ಬಸವಣ್ಣನವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ ಎಂದು ಏರುಧ್ವನಿಯಲ್ಲಿ ಹೇಳಿದರು. ಆಗ ಮತ್ತೆ ಎರಡೂ ಕಡೆಯ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಯಿತು.
ಈ ವೇಳೆ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ನಾವು ಚರ್ಚೆಗೆ ಸಿದ್ಧ. ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ಕೊಡಿ. ಬಿಜೆಪಿಯವರು ಅಧಿವೇಶನದ ಮೊದಲ ದಿನವೇ ಸದನದ ಸಮಯವನ್ನು ಹಾಳು ಮಾಡಲು ಹೊರಟಿದ್ದಾರೆ. ಇವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದಕ್ಕೆ ಆಡಳಿತ ಪಕ್ಷದ ಹಲವು ಸದಸ್ಯರು ದನಿಗೂಡಿಸಿದರು. ಇದರಿಂದ ಗದ್ದಲ ಮತ್ತಷ್ಟು ಹೆಚ್ಚಾಯಿತು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಎಲ್ಲ ಸದಸ್ಯರನ್ನು ಸಮಾಧಾನಗೊಳಿಸಿ, ಸದನವನ್ನು ನಿಯಮಾವಳಿಗಳಂತೆ ನಡೆಸಬೇಕು. ಪ್ರಶ್ನೋತ್ತರ ಮುಗಿಯಲಿ, ನಂತರ ಅವಕಾಶ ಕೊಡುತ್ತೇನೆ ಎಂದು ಹೇಳಿದರು.
ಆಗ ಬಿಜೆಪಿ ಸದಸ್ಯರು ಪ್ರಶ್ನೋತ್ತರ ರದ್ದು ಮಾಡಿ, ಮೊದಲು ವಕ್ಫ್ ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟುಹಿಡಿದರು. ಇದಕ್ಕೆ ಒಪ್ಪದ ಸ್ಪೀಕರ್ ಅವರು ಈ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ನಡೆಯಬೇಕು. ನೀವು ಹೇಳಿದ್ದಕ್ಕೆ ಸರ್ಕಾರ ಉತ್ತರ ಕೊಡಬೇಕು. ಹಾಗಾಗಿ ಪ್ರಶ್ನೋತ್ತರ ನಂತರ ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿ ಎಲ್ಲ ಗದ್ದಲಗಳಿಗೆ ತೆರೆ ಎಳೆದು ಮುಂದಿನ ಕಲಾಪವನ್ನು ಕೈಗೆತ್ತಿಕೊಂಡರು.
ಪಂಚಮಸಾಲಿ ಮೀಸಲಾತಿಗೆ ಒತ್ತಾಯ: ಆ ಬಳಿಕ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಬಿಜೆಪಿಯ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ವಕ್ಫ್‌ಗೆ ಸಂಬಂಧಿಸಿದಂತೆ ಗದ್ದಲ ತಿಳಿಯಾದ ನಂತರ ಬಿಜೆಪಿ ಸದಸ್ಯರಾದ ಯತ್ನಾಳ್, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ ಮತ್ತಿತರರು ಏಕಾಏಕಿ ಎದ್ದುನಿಂತು ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸರ್ಕಾರ ಅವಕಾಶ ಕೊಡುತ್ತಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಪ್ರತಿಭಟನೆಗೆ ಅವಕಾಶ ಕೊಡಿ ಎಂದು ಸದನದ ಸ್ಪೀಕರ್ ಪೀಠದ ಮುಂದಿರುವ ಬಾವಿಗೆ ಆಗಮಿಸಿ ಧರಣಿ ಆರಂಭಿಸಿದರು.
ಈ ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿಯ ಎಲ್ಲ ಸದಸ್ಯರು, ಪಂಚಮಸಾಲಿ ಹೋರಾಟಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಮಾತನಾಡಿದ ಆರ್.ಅಶೋಕ್, ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಹೋರಾಟ ನಡೆಸುವ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಇದು ಸರಿಯಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಸದಸ್ಯರ ಧರಣಿಯಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸ್ಪೀಕರ್ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಇದನ್ನೂ ಓದಿ: ಸುವರ್ಣಸೌಧದ ಮುಂದೆ ರೈತರ ಪ್ರತಿಭಟನೆ: KSRTC ಬಸ್ ಚಾಲಕರ ಕೈ, ಸ್ಟೇರಿಂಗ್ ಕಟ್ಟಿಹಾಕಿ ಆಕ್ರೋಶ