ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ದೊಡ್ಡ ಗುಣ. ಆದರೆ, ಸದ್ಯ ನಾನಿನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸಂಜೆವರೆಗೂ ಕಾದು ನೋಡುತ್ತೇನೆ. ನಂತರ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಪ್ರಕಟಿಸುತ್ತೇನೆ ಎಂದು ಮಾಜಿ ಎಂಎಲ್ಸಿ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇವತ್ತು ಚನ್ನಪಟ್ಟಣದಲ್ಲಿ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದೇನೆ. ಸಂಜೆವರೆಗೂ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇನೆ. ಇವತ್ತೆಲ್ಲ ಕಾಯುತ್ತೇನೆ, ಚನ್ನಪಟ್ಟಣಕ್ಕೆ ಹೋಗಿ ಬಂದ ಮೇಲೆ ಒಂದು ತೀರ್ಮಾನ ಮಾಡುತ್ತೇನೆ. ನಾನು ಕಾಂಗ್ರೆಸ್ನ ಯಾರನ್ನೂ ಭೇಟಿ ಮಾಡಿಲ್ಲ. ಕಾರ್ಯಕರ್ತರ ಜತೆ ಚರ್ಚೆ ಬಳಿಕ ತೀರ್ಮಾನ ಮಾಡುತ್ತೇನೆ ಎಂದರು.
ಸಚಿವರ ಸಭೆಯಲ್ಲಿ ಯೋಗೇಶ್ವರ್ ಪಕ್ಷ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಸಿದ್ದರಾಮಯ್ಯ ಅವರ ದೊಡ್ಡ ಗುಣ. ಮುಖ್ಯಮಂತ್ರಿಗಳು ಹಾಗೆ ಮಾತನಾಡಿದ್ದಾರೆ ಅಂದ್ರೆ ಸಂತೋಷ. ನಾನು ಹಿಂದೆ ಕಾಂಗ್ರೆಸ್ನಲ್ಲೇ ಇದ್ದವನು. ಈಗ ಯಾವ ನಿರ್ಧಾರಕ್ಕೂ ಇನ್ನು ಬಂದಿಲ್ಲ. ಸಂಜೆ ನಂತರ ಮಾತನಾಡುತ್ತೇನೆ ಎಂದರು.
ಬಿಜೆಪಿಯ ಹಿರಿಯರು ಹೇಳಿದ್ದಾರೆ. ಹಾಗಾಗಿ, ಇವತ್ತು ಕಾಯುತ್ತೇನೆ. ದೆಹಲಿಯ ನಾಯಕರು ಟಿಕೆಟ್ ಬಗ್ಗೆ ತೀರ್ಮಾನ ಮಾಡಬಹುದು. ಆದರೆ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಮುಖಂಡರ ಅಭಿಪ್ರಾಯದ ಮೇಲೆ ಮುಂದಿನ ತೀರ್ಮಾನ ಮಾಡುತ್ತೇನೆ. ಇವತ್ತು ಸಂಜೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.
ಇದನ್ನೂ ಓದಿ: ಸಿ ಪಿ ಯೋಗೇಶ್ವರ್ ನಡೆ - ನುಡಿ ಬಗ್ಗೆ ಮುಂದೆ ಕಾದು ನೋಡೋಣ: ಡಿಸಿಎಂ ಡಿ ಕೆ ಶಿವಕುಮಾರ್