ಬೆಂಗಳೂರು: ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಮನವಿ ಸಲ್ಲಿಸಿತು.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ನಿಯೋಗವು ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವಂತೆ ಮನವಿ ಮಾಡಿತು. ಮುನಿರತ್ನ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ. ಕಮಿಷನ್, ಅತ್ಯಾಚಾರ, ಹನಿಟ್ರ್ಯಾಪ್ ಸೇರಿದಂತೆ ವಿವಿಧ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಎಲ್ಲ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವಂತೆ ನಿಯೋಗ ಮನವಿ ಮಾಡಿದೆ.
ನಿನ್ನೆ ತಡರಾತ್ರಿವರೆಗೆ ನಗರದ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ ಒಕ್ಕಲಿಗ ಸಚಿವರು, ಶಾಸಕರು, ನಾಯಕರು ಸಭೆ ನಡೆಸಿ ಮುನಿರತ್ನ ಜಾತಿ ನಿಂದನೆ ಆರೋಪ ಸಂಬಂಧ ಚರ್ಚೆ ನಡೆಸಿದ್ದರು. ಎಸ್‌ಐಟಿ ತನಿಖೆಗೆ ಒತ್ತಾಯಿಸುವ ನಿಟ್ಟಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಾತಿ ನಿಂದನೆ ಸೇರಿದಂತೆ ಯಾವೆಲ್ಲ ಪ್ರಕರಣಗಳು ಮುನಿರತ್ನ ವಿರುದ್ಧ ದಾಖಲಾಗಿವೆಯೋ ಆ ಎಲ್ಲ ಪ್ರಕರಣಗಳ ಕುರಿತು ಎಸ್‌ಐಟಿ ಮೂಲಕ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲು ತೀರ್ಮಾನಿಸಿತ್ತು. ಸಿಎಂ ಭೇಟಿ ಬಳಿಕ ರಾಜ್ಯಪಾಲರ ಅಂಗಳಕ್ಕೂ ಪ್ರಕರಣವನ್ನು ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು.
ಮುನಿರತ್ನಗೆ ಸಂಕಷ್ಟ: ಜಾತಿ ನಿಂದನೆ ಮತ್ತು ಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಮುನಿರತ್ನಗೆ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಈ ಮಧ್ಯೆ ಬಿಜೆಪಿ ಶಾಸಕನ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮುನಿರತ್ನ ಸೇರಿ ಏಳು ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಡೌನ್ಗೆ ಕರೆಸಿ ಮುನಿರತ್ನ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ.
ಇದನ್ನೂ ಓದಿ: ಮುನಿರತ್ನ ಕೇಸ್: ತನಿಖೆಯಾಗಿ ಸತ್ಯ ಹೊರಬರಲಿ, ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ-ಬಿಜೆಪಿ - Muniratna Case