ಶಿವಮೊಗ್ಗ: "ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯುಕ್ತ ಅಲ್ಲ" ಎಂದು ಉಡುಪಿಯ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸರ್ಕಾರಗಳು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿಸುತ್ತಾರೆ, ನಂತರ ಹಾಗೆಯೇ ಮುಚ್ಚಿಡುತ್ತಾರೆ. ಇದು ಯಾಕೆಂದು ತಿಳಿಯುತ್ತಿಲ್ಲ" ಎಂದರು.
"ಒಂದೆಡೆ ಜಾತಿ ಬೇಡ ಎನ್ನುವುದು, ಮತ್ತೊಂದೆಡೆ ಎಲ್ಲ ಸೌಲಭ್ಯಗಳನ್ನು ಜಾತಿಯ ಆಧಾರದಲ್ಲಿ ನೀಡುತ್ತಿರುವುದು ವಿಪರ್ಯಾಸ" ಎಂದು ಹೇಳಿದರು.
"ನಾವು ಅಯೋಧ್ಯೆಗೆ ಹೋಗಿ ಬಂದಿದ್ದೇವೆ. ರಾಮಮಂದಿರದ ಬಾಕಿ ಉಳಿದ ಕಾಮಗಾರಿಗಳು ನಡೆಯುತ್ತಿದೆ. ಒಂದು ವರ್ಷದಲ್ಲಿ ಇನ್ನುಳಿದ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ರಾಮರಾಜ್ಯ ಸ್ಥಾಪನೆಗಾಗಿ ನಮಗೆ ರಾಮ ಮಂದಿರ ಬೇಕು. ಇವತ್ತು ಪ್ರಜಾರಾಜ್ಯ ಇದೆ. ಪ್ರಜೆಗಳು ರಾಮನ ಗುಣಗಳನ್ನು ಮೈಗೂಡಿಸಿಕೊಂಡರೆ ದೇಶ ರಾಮರಾಜ್ಯ ಆಗುತ್ತದೆ" ಎಂದು ತಿಳಿಸಿದರು.
"ರಾಮಮಂದಿರದಲ್ಲಿ ಸೇವಾ ಪಟ್ಟಿ ಇಲ್ಲ. ನಮ್ಮ ಸುತ್ತಮುತ್ತಲಿನಲ್ಲಿ ಇರುವವರಿಗೆ ನಾವು ಸಹಾಯ ಮಾಡಬೇಕು, ಅದೇ ಸೇವೆ. ನಮ್ಮ ಮಠದಿಂದ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಆಗುತ್ತಿದೆ. ರಾಮನ ಮಂದಿರ ಶುರುವಾದ ಮೇಲೆ ಇಂತಹ ಕಾರ್ಯಗಳು ನಡೆಯುತ್ತಿವೆ. ನಮ್ಮ ಸುತ್ತಮುತ್ತಲಲ್ಲಿರುವ ದುಃಖಿತರ ಸೇವೆ ಮಾಡುವುದು ರಾಮನ ಸೇವೆ ಆಗುತ್ತದೆ. ರಾಮಮಂದಿರ ದೇಶದ ಹೆಮ್ಮೆಯ ಪ್ರತೀಕ" ಎಂದು ಹೇಳಿದರು.
ಇದನ್ನೂ ಓದಿ: ಹಿಂದುತ್ವದ ಉಳಿವಿಗಾಗಿ ಸಂಕ್ರಾಂತಿಯಂದು ನೂತನ ಬ್ರಿಗೇಡ್ಗೆ ನಾಮಕರಣ: ಕೆ.ಎಸ್. ಈಶ್ವರಪ್ಪ