ಕಾರವಾರ: "ನದಿಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಬಂತು. ತಿರುಗಿ ನೋಡುವಷ್ಟರಲ್ಲಿ ಗುಡ್ಡ ಜರಿದು ನದಿಗೆ ಬಿದ್ದು ನೀರೆಲ್ಲಾ ನಮ್ಮ ಕಡೆ ನುಗ್ಗಿ ಬರುತ್ತಿರುವುದನ್ನು ಕಂಡು, ಎಲ್ಲರಿಗೂ ಓಡಿ ಎಂದೂ ಕೂಗುತ್ತಲೇ ನಾವು ಓಡಿ ಗುಡ್ಡ ಹತ್ತಲು ಪ್ರಯತ್ನಿಸಿದೆವು" ಎಂದು ಶಿರೂರು ಗುಡ್ಡ ಕುಸಿತದ ಭೀಕರತೆಯನ್ನು ಗ್ರಾಮಸ್ಥರು ಬಿಚ್ಚಿಟ್ಟರು.
ಜುಲೈ 16ರಂದು ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿಯುವ ವೇಳೆ ಒಂದಿಷ್ಟು ಜನ ಗುಡ್ಡ ಏರಿ ಅವಘಡದಿಂದ ತಪ್ಪಿಸಿಕೊಂಡರೆ, ಇನ್ನು ಕೆಲವರು ನೀರಿನಲ್ಲಿ ತೇಲಿ ಹೋಗುತ್ತಿದ್ದವರನ್ನು ಹಿಡಿದು ರಕ್ಷಿಸಿದರು. ಈ ನಡುವೆ ಓರ್ವ ಮಹಿಳೆ ನಾಪತ್ತೆಯಾಗಿದ್ದಾರೆ.
ಹೆದ್ದಾರಿ ಬದಿಯಲ್ಲಿ ಅಂಗಡಿ ನಡೆಸುತ್ತಿದ್ದ ಶಿರೂರಿನ ಲಕ್ಷ್ಮಣ ನಾಯ್ಕ ಕುಟುಂಬದ 5 ಮಂದಿ ಸೇರಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದಾರೆ. ಸದ್ಯ ನಾಲ್ವರ ಮೃತದೇಹ ಮಾತ್ರ ಸಿಕ್ಕಿದೆ.
ಮುಂದಿನ ವಾರ ಬರುವೆನೆಂದು ಹೋದವಳು..: ಮುಂದಿನ ವಾರ ಬರುವುದಾಗಿ ತವರು ಮನೆಯಿಂದ ಮೃತ ಲಕ್ಷ್ಮಣ ನಾಯ್ಕ ಅವರ ಶಾಂತಿ ನಾಯ್ಕ ಎಂಬವರು ಗಂಗಾವಳಿ ನದಿ ಮೂಲಕ ಶವವಾಗಿ ತೇಲಿ ಬಂದು ಗೋಕರ್ಣದಲ್ಲಿ ಪತ್ತೆಯಾಗಿದ್ದಾರೆ. ಎಂಟು ವರ್ಷದ ಹಿಂದೆ ಇವರು ಮದುವೆಯಾಗಿದ್ದರು. ಬಾಲ್ಯವನ್ನು ಗೋಕರ್ಣದಲ್ಲಿಯೇ ಕಳೆದಿದ್ದ ಶಾಂತಿ, ತನ್ನ ಸಂಗಡಿಗರೊಂದಿಗೆ ಇತ್ತೀಚೆಗೆ ಸಾಕಷ್ಟು ಹೊತ್ತು ಮಾತನಾಡಿದ್ದರು. ಈ ವೇಳೆ, ಮತ್ತೆ ಶಿರೂರಿಗೆ ಹೋಗುವಾಗ ಮರಳಿ ಬರುತ್ತೇನೆ, ಆಗ ಭೇಟಿಯಾಗುವುದಾಗಿಯೂ ಹೇಳಿದ್ದರಂತೆ.
ಆದರೆ, ಶಾಂತಿ ನಾಯ್ಕ ಶವ ನದಿಯಲ್ಲಿ ತೇಲುತ್ತಿರುವುದನ್ನು ತಿಳಿದು ನದಿ ದಡಕ್ಕೆ ಆಗಮಿಸಿದ್ದವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಆರೋಗ್ಯ ಕೇಂದ್ರಕ್ಕೆ ಶವ ತಂದಾಗ ನೂರಾರು ಜನ ಜಮಾಯಿಸಿ ಶೋಕ ವ್ಯಕ್ತಪಡಿಸಿದರು.
ಕೊಚ್ಚಿಹೋದ ಮನೆಗಳು: ದಿಢೀರ್ ಕುಸಿದ ಗುಡ್ಡ ಹೆದ್ದಾರಿ ಮೇಲೆ ಬಿದ್ದಿರುವುದಕ್ಕಿಂತ ಹೆಚ್ಚಾಗಿ ನದಿಗೆ ಬಿದ್ದಿದೆ. ಈ ವೇಳೆ ನದಿಯಲ್ಲಿದ್ದ ನೀರು, ಕೆಸರು ಎಲ್ಲವೂ ಮತ್ತೊಂದು ದಂಡೆಯ ಉಳುವರೆ ಗ್ರಾಮದ ಮೇಲೆರಗಿದೆ. ನೀರಿನ ರಭಸ ಎಷ್ಟಿತ್ತೆಂದರೆ ಗ್ರಾಮದ ಏಳು ಮನೆಗಳ ಪೈಕಿ ನಾಲ್ಕು ಮನೆಗಳು ಕುರುಹಿಲ್ಲದಂತೆ ಕೊಚ್ಚಿಹೋಗಿದೆ. ಅಲ್ಲದೆ ಮತ್ತೆ ಮೂರು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ.
14 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನದಿ ನೀರು ನುಗ್ಗಿ ಹಾನಿಯಾಗಿದೆ. ಘಟನೆ ನಡೆದ ಪ್ರದೇಶದ ಇನ್ನೊಂದು ಬದಿಯ ಎದುರು ಮನೆಯಲ್ಲಿಯೇ ವಾಸವಾಗಿದ್ದ ಸಣ್ಣಿ ಹನುಮಂತ ಗೌಡ ಎಂಬವರೂ ಕಾಣೆಯಾಗಿದ್ದಾರೆ.
"ಮನೆಯಲ್ಲಿ ತಾಯಿ ಮಾತ್ರ ಇದ್ದರು. ನಾನು ಅಂಗಡಿಗೆ ಹೋಗಿದ್ದೆ. ಏಕಾಏಕಿ ಜೋರಾದ ಶಬ್ದ ಕೇಳಿ ಬಂತು. ಬಂದು ನೋಡಿದಾಗ ನಮ್ಮ ಮನೆಯೇ ಅಲ್ಲಿರಲಿಲ್ಲ. ಅಮ್ಮ ಅಡುಗೆ ಮಾಡುತ್ತಿದ್ದಳು. ಅಮ್ಮ ನಾನು ಮಾತ್ರ ವಾಸವಾಗಿದ್ದು ಈವರೆಗೂ ಅವರು ಪತ್ತೆಯಾಗಿಲ್ಲ" ಎಂದು ಮಗ ಮಂಜುನಾಥ ನೋವು ತೋಡಿಕೊಂಡರು.
ಇದಲ್ಲದೆ ನದಿ ದಂಡೆಯ ಉದ್ದಗಲ್ಲಕ್ಕೂ ಕೃಷಿ ಭೂಮಿ ಇದ್ದು, ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿ.ಮೀವರೆಗೂ ನಾಟಿ ಮಾಡಿದ ಗದ್ದೆಗಳಿಗೆ ಕಲ್ಲು, ಮಣ್ಣು, ಮರಗಳು ಬಿದ್ದು ಸಂಪೂರ್ಣ ಹಾನಿಯಾಗಿದೆ. ನದಿ ದಂಡೆಯುದ್ದಕ್ಕೂ ಕಲ್ಲುಗಳಿಂದ ಕೊರೆತವಾಗದಂತೆ ಕೋಟ್ಯಂತರ ರೂ ವೆಚ್ಚದಲ್ಲಿ ಸುಮಾರು 2 ಕಿ.ಮೀವರೆಗೆ ನಿರ್ಮಿಸಿದ್ದ ಪಿಚ್ಚಿಂಗ್ ಸಂಪೂರ್ಣ ಹಾನಿಯಾಗಿ ನದಿಯಲ್ಲಿ ಕೊಚ್ಚಿಹೋಗಿದೆ. ತೆಂಗು, ಹಲಸು, ಅಡಿಕೆ, ಮಾವು ಸೇರಿದಂತೆ ಹಲವು ಮರಗಳು ಧರೆಗುರುಳಿವೆ. ಮೀನುಗಾರರ ಬಲೆಗಳು, ಬೋಟ್‌ಗಳು ಎಲ್ಲವೂ ಕೊಚ್ಚಿ ಹೋಗಿ, ಇದ್ದ ಬೋಟ್‌ಗಳೂ ಬಳಸಲಾಗದ ಸ್ಥಿತಿ ತಲುಪಿದೆ. ಮೃತ ಲಕ್ಷ್ಮಣ ನಾಯ್ಕ ಕುಟುಂಬದವರು ಅಂಗಡಿ ನಡೆಸುತ್ತಿದ್ದ ಎದುರಿನಲ್ಲಿಯೇ ಇದ್ದ ಗುಡ್ಡದ ಮಣ್ಣು ಕುಸಿಯುತ್ತಿರುವ ಬಗ್ಗೆ ಸ್ಥಳೀಯರು ಅವರ ಗಮನಕ್ಕೆ ತಂದಿದ್ದರಂತೆ. ಅಲ್ಲದೇ ಅಂಗಡಿ ಬಂದ್ ಮಾಡುವಂತೆಯೂ ಹೇಳಿದ್ದರಂತೆ. ಆದರೆ ಹೀಗೆ ಹೇಳಿದ ಒಂದು ಗಂಟೆಯಲ್ಲಿಯೇ ಈ ಘಟನೆ ನಡೆದಿದೆ. ಅವರು ಕೂಡ ಇಷ್ಟೊಂದು ಪ್ರಮಾಣದಲ್ಲಿ ಗುಡ್ಡ ಕುಸಿಯುವ ಬಗ್ಗೆ ನಿರೀಕ್ಷಿಸಿರಲಿಲ್ಲ. ಆದರೆ ಅವೈಜ್ಞಾನಿಕ ಕಾಮಗಾರಿಗೆ ದುಡಿದು ತಿನ್ನುತ್ತಿರುವವರು ಬಲಿಯಾಗಿದ್ದಾರೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಮಗಳ ಮದುವೆಗೆ ಮಾಡಿಟ್ಟ ಬಂಗಾರ ನದಿ ಪಾಲು: ಗಂಗಾವಳಿ ನದಿ ದಂಡೆಯಲ್ಲಿ ವಾಸವಾಗಿದ್ದ ನೀಲ ಗೌಡ ಎಂಬವರ ಮನೆಯೂ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ನೀಲ ಗೌಡರು ಮುಂದಿನ ವರ್ಷ ಮಗಳ ಮದುವೆ ಮಾಡಲು ಬಂಗಾರ ಮಾಡಿಸಿದ್ದರಂತೆ. ಆದರೆ ಸಂಪೂರ್ಣ ಮನೆಯೇ ಕೊಚ್ಚಿ ಹೋಗಿದ್ದು ಎಲ್ಲವೂ ನದಿ ಪಾಲಾಗಿದೆ. ಅವರೆಲ್ಲರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ನೋಡಲು ಬಂದರೆ ಜಾಗ ಬಿಟ್ಟು ಬೇರೇನೂ ಇಲ್ಲ ಎಂದು ಸಂಬಂಧಿಕರಾದ ಅಂಗಡಿಬೈಲ್ ತಾರಾ ಗೌಡ ನೋವು ತೋಡಿಕೊಂಡರು.
ಸ್ಥಳ ಪರಿಶೀಲನೆಗೆ ಆಗಮಿಸಿದ ಅಂಕೋಲಾ ತಹಶೀಲ್ದಾರ್ ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರು ಉಳುವರೆಯಲ್ಲಿ ಬಿದ್ದ ಕಾರಣ ಗ್ರಾಮದ ಏಳು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಕೊಚ್ಚಿ ಹೋಗಿವೆ. ಕೃಷಿ ಭೂಮಿ, ಅಡಿಕೆ, ತೆಂಗಿನ ಮರಗಳಿಗೂ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಏಳು ಜನರ ದಾರುಣ ಸಾವು, ಮುಂದುವರಿದ ಕಾರ್ಯಾಚರಣೆ - hill collapsed