ಹುಬ್ಬಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಂಗೊಳಿಸುತ್ತಿರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಕೀಟ ಹಾಗೂ ರೋಗ ಬಾಧೆ ಆವರಿಸುತ್ತಿದ್ದು, ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಕಳೆದ ವರ್ಷ ಧಾರವಾಡ ತಾಲೂಕಿನಲ್ಲಿ ಸೋಯಾಬೀನ್, ಹೆಸರು, ಉದ್ದು ಬಿತ್ತನೆ ಮಾಡಿದ್ದ ರೈತರು, ಆರಂಭದಲ್ಲಿ ಉತ್ತಮ ಮಳೆಯಾಗಿ ನಂತರ ಕೊರತೆಯ ಪರಿಣಾಮ ಹಸಿರು ಬರ ಆವರಿಸಿದ್ದರಿಂದ ಕೈ ಸುಟ್ಟುಕೊಂಡಿದ್ದರು.
ಈ ಬಾರಿ ಮುಂಗಾರು ಅತ್ಯುತ್ತಮವಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಹೆಸರು, ಉದ್ದು ಮತ್ತು ಸೋಯಾಬೀನ್ ಬಿತ್ತನೆ ಮಾಡಲಾಗಿದೆ. ಅದರಲ್ಲೂ ಕುಂದಗೋಳ ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 49 ಸಾವಿರ ಹೆಕ್ಟೇರ್ ಅಂದರೆ ಶೇ 99 ರಷ್ಟು ಬಿತ್ತನೆಯಾಗಿದ್ದು, ಅದರಲ್ಲೂ 13 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತಲಾಗಿದೆ. ಇದಲ್ಲದೆ ಸೋಯಾಬೀನ್, ಉದ್ದಿನ ಬೆಳೆ ಹುಲುಸಾಗಿ ಬೆಳೆದಿದ್ದರೂ ಬೆಳೆಗಳಿಗೆ ತುಕ್ಕು (ತಾಮ್ರ) ರೋಗ ಕಾಣಿಸಿಕೊಂಡಿದೆ.
ಎಲೆಗಳ ಕೆಳಭಾಗದಲ್ಲಿ ಕಂದು ಬಣ್ಣದ ಚುಕ್ಕೆಯ ಲಕ್ಷಣಗಳು ಕಂಡು ಬಂದಿದ್ದು, ನಂತರ ಎಲೆಯ ಎಲ್ಲ ಭಾಗ ಆವರಿಸಿ ಸುಟ್ಟಂತಾಗುತ್ತಿವೆ. ಅದರ ಜೊತೆಗೆ ಕೀಟಗಳ ಬಾಧೆ ಕಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಸಾಲ ಶೂಲ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಕುಂದಗೋಳ ಭಾಗದ ರೈತರು ಕಂಗಾಲಾಗಿದ್ದಾರೆ. ಅತೀವೃಷ್ಟಿಯಿಂದ ಬೆಳೆ ಹಾನಿಯಾಗಿರುವುದಲ್ಲದೇ ರೋಗ ಹಾಗೂ ಕೀಟ ಬಾಧೆಯಿಂದಾದ ಹಾನಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಬಸವರಾಜ್ ಯೋಗಪ್ಪನರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕುಂದಗೋಳ ತಾಲೂಕಿನಾದ್ಯಂತ ಮಳೆಯಿಂದ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದನ್ನು ಕುಂದಗೋಳ ಸಹಾಯಕ ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ ವೀಕ್ಷಿಸಿದರು. ಅಲ್ಲದೇ ರೈತರಿಗೆ ಸಲಹೆ ನೀಡಿದರು. ಜಮೀನಿನಲ್ಲಿ ನಿಂತ ನೀರನ್ನು ಹೊರಗೆ ಹಾಕುವುದು. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಮೈಕ್ರೋ ನ್ಯೂಟ್ರೆಂಟ್ ಸ್ಪ್ರೆ ಅಲ್ಲದೇ 13,0,45 ಅಥವಾ 19 ಸಿಂಪಡಣೆ ಮಾಡಿ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೀಟಬಾಧೆ ಹೆಚ್ಚಿಗೆ ಇರುವುದರಿಂದ ರೈತ ಒತ್ತಾಯದ ಮೇರೆಗೆ ಕೊರಾಜಿನ್, ಎಲೆಚುಕ್ಕಿ ರೋಗಕ್ಕೆ ಎಗ್ಸೋಕೊನೆಜಾಲ್, ಎಲೆ ಹಿರುವ ಕೀಟಕ್ಕೆ ಥೈಯೋಮಿಜೈಲ್ ಬಳಸಿಕೊಳ್ಳಬೇಕು. ಅದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬೇಕು ಎಂದು ಮನವಿ ಮಾಡಿದರು. ಬಾರಿ ಪ್ರಮಾಣದಲ್ಲಿ ಹಳದಿಯಾಗಿದ್ದು, ಅದು ಮೊಗ್ಗು ಬಿಡುವ ಚಾನ್ಸಸ್ ಕಡಿಮೆ ಇರುತ್ತದೆ. ಇದರಿಂದ ರೈತರು ಮಳೆ ನಿಂತ ಮೇಲೆ ಔಷಧಿ ಸಿಂಪಡಣೆ ಮಾಡಿದರೆ ಸರಿಯಾಗಬಹುದು. ಇಲ್ಲದಿದ್ದರೆ ಹಳದಿ ರೋಗ ಕಂಡು ಬಂದಲ್ಲಿ ತಕ್ಷಣ ಅದನ್ನು ಕಿತ್ತು ಬೇರ್ಪಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಓದಿ: ರಾಜ್ಯದ ಜಲಾಶಯಗಳ ನೀರಿನ ಸಂಗ್ರಹ ಮಟ್ಟದಲ್ಲಿ ಭಾರೀ ಏರಿಕೆ - Dam Water Level Today