ದಾವಣಗೆರೆ: ಕರ್ನಾಟಕ ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾನಿಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆಯ ಸಚಿವ ನಾಗೇಂದ್ರ ಮನವಿ ಮಾಡಿದರು.
ವಾಲ್ಮೀಕಿ ಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆಗಳಿವೆ. ಹಲವು ಹುದ್ದೆಗಳಿಗೆ ಎಸ್ಸಿ - ಎಸ್ಟಿಯವರಿಗೆ ನೇಮಕ ಮಾಡಿ. ಮೆಟ್ರೋ ಸ್ಟೇಷನ್ಗೆ ವಾಲ್ಮೀಕಿ ಹೆಸರು ನಾಮಕರಣ ಮಾಡ್ಬೇಕು. ಯಾದಗಿರಿ ಜಿಲ್ಲೆಯಲ್ಲಿ 20 ಎಕರೆ ಜಮೀನು ಇದ್ದು, ಅಲ್ಲಿ ಶಿಕ್ಷಣಕ್ಕಾಗಿ 25 ಕೋಟಿ ಹಣವನ್ನು ನೀಡಿ. ಹದಿನೈದರಲ್ಲಿ ಹದಿನಾಲ್ಕು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಎಸ್ಟಿ ಎರಡು ಮೀಸಲು ಕ್ಷೇತ್ರಗಳನ್ನು ನಿಮ್ಮ ಪಾದಕ್ಕೆ ಹಾಕ್ತೇವೆ ಎಂದು ಶಪಥ ಮಾಡಿದರು. ನಮ್ಮ ಜನತೆ ಕಾಂಗ್ರೆಸ್ ಪರ ಇರುತ್ತಾರೆ. ನಾವ್ಯಾರು ಸುಳ್ಳಿಗೆ ಮಾರು ಹೋಗುವುದಿಲ್ಲ. ಬೆವರು ಸುರಿಸಿ ನಮ್ಮ ಪಕ್ಷವನ್ನು ಲೋಕಸಭೆಯಲ್ಲಿ ಗೆಲ್ಲಿಸಿಕೊಳ್ಳುತ್ತೇವೆ ಎಂದರು.
ಸತೀಶ್ ಜಾರಕಿಹೋಳಿ ಹೇಳಿದ್ದೇನು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ನಮ್ಮ ಹೋರಾಟ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಮಗೆ ಟ್ರೈಬಲ್ ಯೂನಿವರ್ಸಿಟಿ, ಬ್ಯಾಕ್ ಲಾಗ್ ಹುದ್ದೆಗಳು, ವಾಲ್ಮೀಕಿ ಹೆಸರು ನಾಮಕರಣ ಮಾಡ್ಬೇಕು. ಅದನ್ನು ಸಿದ್ದರಾಮಯ್ಯ ಅವರ ಸರ್ಕಾರ ಹಂತ ಹಂತವಾಗಿ ಮಾಡುತ್ತೇ ಎಂಬ ಭರವಸೆ ಇದೆ. ಶೈಕ್ಷಣಿಕ ಉದ್ಯೋಗ ಅವಕಾಶಕ್ಕಾಗಿ ಎಸ್ಸಿ ಎಸ್ಟಿಗಾಗಿ 30 ಸಾವಿರ ಕೋಟಿ ಹಣವನ್ನು ಮೀಸಲಿಡಬೇಕು. ಆಗ ಮಾತ್ರ ಸಮಾಜ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯ. ಕೆಲವು ಕಡೆ ಲೋನ್ ಕೊಡಲು ತೊಂದರೆಯಾಗ್ತಿದೆ. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೋಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಬೆಂಗಳೂರಿನಲ್ಲಿ ಮಠಕ್ಕೆ ಒಂದು ಜಾಗ ಬೇಕಾಗಿದೆ. ಆ ಭೂಮಿಯನ್ನು ಕೊಡಬೇಕು. ಹೆಚ್ಚು ಹೆಚ್ಚು ಉದ್ಯೋಗವಕಾಶಗಳನ್ನು ಸರ್ಕಾರ ಕಲ್ಪಿಸಿಕೊಡಬೇಕಾಗಿದೆ ಎಂದರು.
ಶ್ರೀರಾಮನನ್ನು ಪರಿಚಯಿಸಿದವರು ವಾಲ್ಮೀಕಿ: ಇಡೀ ಭೂಮಂಡಲಕ್ಕೆ ಶ್ರೀರಾಮನನನ್ನು ಪರಿಚಯಿಸಿದವರು ವಾಲ್ಮೀಕಿಯವರು. ಶ್ರೀರಾಮನನ್ನು ರಾಮಯಣ ಗ್ರಂಥದ ಮೂಲಕ ಪರಿಚಯಿಸದೇ ಇದ್ದಿದ್ದರೆ ರಾಮನ ಪರಿಚಯವೇ ಆಗ್ತಿರಲಿಲ್ಲ. ಆದರೆ ರಾಮಮಂದಿರ ಕಟ್ಟಿಸುವವರು ಈ ಮೊದಲು ವಾಲ್ಮೀಕಿ ಮಂದಿರ ಕಟ್ಟಿಸಬೇಕಿತ್ತು. ಇದು ನಮ್ಮೆಲ್ಲರ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದು ವಾಲ್ಮೀಕಿ ಜಾತ್ರೆಯಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ತಿಳಿಸಿದರು.
ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಶ್ರೀರಾಮ ಮಂದಿರದ ಪಕ್ಕದಲ್ಲೇ ಭವ್ಯವಾದ ವಾಲ್ಮೀಕಿ ಮಂದಿರ ಕಟ್ಟುವ ಗುರಿ ನಮ್ಮದು. ರಾಮರಾಜ್ಯದ ಕಲ್ಪನೆಯನ್ನು ಕೊಟ್ಟಂತವರು ಮಹರ್ಷಿ ವಾಲ್ಮೀಕಿಯವರು. ಅವರು ಕಲ್ಪನೆಯಂತೆ ರಾಮರಾಜ್ಯ ಆಗುವಂತೆ ಸಿದ್ದರಾಮಯ್ಯನವರು ಬಡವರು, ತುಳಿತಕ್ಕೊಳಗಾದ ಸಮುದಾಯಗಳಿಗೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವರ ಪರ ಇರಬೇಕು. ಯಾವುದೇ ಸಚಿವ ಸಂಪುಟದಲ್ಲಿ ವಾಲ್ಮೀಕಿ ಸಮಾಜದ ಮೂವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಮೂರು ಸಚಿವ ಸ್ಥಾನವನ್ನು ಸಿದ್ದರಾಮಯ್ಯ ನಮ್ಮ ಸಮಾಜಕ್ಕೆ ನೀಡಿದ್ದಾರೆ. ಸಿದ್ದರಾಮೋತ್ಸವ ಸಮಿತಿ ಅಧ್ಯಕ್ಷ ಸ್ಥಾನ ನನಗೆ ನೀಡಿದ್ದು, ಅದು ವಾಲ್ಮೀಕಿ ಸಮಾಜಕ್ಕೆ ನೀಡಿದ ಗೌರವ. ಮೋದಿ ರಾಮನ ಬದಲು ದಶರಥ ರಾಮನ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಒಂದು ನೂರು ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿದೆ ಎಂದರು.
ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, ವಾಲ್ಮೀಕಿ ರಾಮಾಯಣ ಶ್ರೇಷ್ಠವಾದ ಗ್ರಂಥ, ಶ್ರೀರಾಮನ ಪರಿಚಯಿಸಿದವರು ವಾಲ್ಮೀಕಿಯವರು. ರಾಮ ಕಾಡಿನಲ್ಲಿ ವನವಾಸ ಮಾಡಿದಾಗ ಆಂಜನೇಯ, ಜಾಂಬವಂತನು ಜೊತೆಯಲ್ಲಿದ್ದು ಗೆಲುವು ಸಾಧಿಸಲು ಸಹಕಾರಿ ಆಗಿದ್ದರು. ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದೀರಿ.. ನಾವು ಕೂಡ ರಾಮನ ಭಕ್ತರೇ. ನಾವು ಪೂಜೆ ಮಾಡ್ತೇವೆ. ರಾಮ್ ರಹೀಮ್ನನ್ನು ಕೂಡ ಪ್ರೀತಿ ವಾತ್ಸಲ್ಯದಿಂದ ನೋಡುತ್ತೇವೆ ಎಂದು ಗಾಂಧೀಜಿ ಹೇಳಿದ್ದಾರೆ. ಹಲವು ಜಾತಿ ಧರ್ಮಗಳಿರಬಹುದು ನಾವು ಮೊದಲು ಮಾನವರು. ಇನ್ನು ಮಾದಿಗ ಹಾಗೂ ವಾಲ್ಮೀಕಿ ಸಮುದಾಯಗಳು ತಾಯಿ ಮಕ್ಕಳ ಸಂಬಂಧ ಹೊಂದಿವೆ ಎಂದರು.
ಓದಿ: ಗುಂಡಿಕ್ಕಿ ಕೊಲ್ಲಬೇಕು ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು