ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ವಾರ ವಾಲ್ಮೀಕಿ ನಿಗಮದ ಅಧ್ಯಕ್ಷ ಮತ್ತು ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರ ನಿವಾಸದ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶಾಸಕರ ಆಪ್ತ ಸಹಾಯಕರ ವಿಚಾರಣೆ ನಡೆಸಿದ್ದರು. ಭಾನುವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ರಾಯಚೂರಿನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಯಚೂರಿನಿಂದ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದಾರೆ. ಆಪ್ತರ ಜೊತೆ ಖಾಸಗಿ ಕಾರಿನಲ್ಲಿ ಬೆಂಗಳೂರು ಕಡೆಗೆ ಮಂತ್ರಾಲಯ ಮಾರ್ಗವಾಗಿ ಹೋಗಿರುವ ಸಾಧ್ಯತೆಗಳಿವೆ. ರಾತ್ರೋರಾತ್ರಿ ರಾಯಚೂರಿಗೆ ಬಂದಿದ್ದು, ಬೆಳಗ್ಗೆ ಯಾರನ್ನೂ ಭೇಟಿಯಾಗದೇ, ಮನೆಯಿಂದ ಅವಸರದಲ್ಲಿ ಕಾರು ಹತ್ತಿ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಜ್ವರಕ್ಕೆ ವ್ಯಕ್ತಿ ಬಲಿ - Dengue Fever
ಇತ್ತೀಚೆಗೆ ಇ.ಡಿ ಅಧಿಕಾರಿಗಳ ತಂಡ ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ಆರ್‌ಆರ್ ಕಾಲೋನಿಯ ನಿವಾಸದ ಮೇಲೆ ದಾಳಿ ನಡೆಸಿ, ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ್ದರು. ಜೊತೆಗೆ ಅವರ ಆಪ್ತರನ್ನು ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದರು.