ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕಳೆದ ಮೂರು ತಿಂಗಳ ಹಿಂದೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಾಗೇಂದ್ರ ಅವರಿಗೆ 2 ಲಕ್ಷ ರೂಪಾಯಿ, ಇಬ್ಬರ ಶ್ಯೂರಿಟಿ ಹಾಗೂ ಸಾಕ್ಷ್ಯ ನಾಶಪಡಿಸದಂತೆ ಷರತ್ತುಬದ್ಧ ಜಾಮೀನನ್ನು ಕೋರ್ಟ್ ಮಂಜೂರು ಮಾಡಿದೆ. ಜೈಲಾಧಿಕಾರಿಗಳು ಆದೇಶ ಪ್ರತಿ ದೊರೆತ ಬಳಿಕ ಬಿಡುಗಡೆ ಪ್ರಕ್ರಿಯೆ ನಡೆಸಲಿದ್ದು, ನಾಳೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಜಾರಿ ನಿರ್ದೇಶಾನಾಲಯ (ಇ.ಡಿ) ಚಾರ್ಜ್ ಶೀಟ್ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಇತರ ಆರೋಪಿಗಳ ಪಾತ್ರ ಹಾಗೂ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಣದ ದುರ್ಬಳಕೆ ಕುರಿತಂತೆ ತನಿಖಾ ವರದಿಯನ್ನು ಅಧಿಕಾರಿಗಳು ಸಲ್ಲಿಸಿದ್ದು, ನ್ಯಾಯಾಲಯದಿಂದ ಸ್ವೀಕೃತವಾಗಿರುವುದಾಗಿ ಪ್ರಕಟಣೆಯಲ್ಲಿ ಇ.ಡಿ. ತಿಳಿಸಿತ್ತು.
ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮಾಜಿ ಸಚಿವ ನಾಗೇಂದ್ರಗೆ ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ನಿಗಮದ ಎಂ.ಡಿ. ಜೆ.ಜಿ. ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು. ಅವ್ಯವಹಾರ ಸಂಬಂಧ ಎಸ್ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಪತ್ತೆ ಹಚ್ಚಲಾದ 89.62 ಕೋಟಿ ಹಣವನ್ನ ಆಂಧ್ರ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್ಗಳಲ್ಲಿ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ನಗರದ ಎಂ.ಜಿ. ರೋಡ್ ನಲ್ಲಿರುವ ಯೂನಿಯನ್ ಬ್ಯಾಂಕ್ನಿಂದ ವರ್ಗಾವಣೆಯಾಗಿದ್ದ 187 ಕೋಟಿ ರೂ.ಹಣದಲ್ಲಿ 43.33 ಕೋಟಿ ಹಣವನ್ನ ರಾಜ್ಯದ ಗಂಗಾ ಕಲ್ಯಾಣ ಯೋಜನೆಗೆ ಮೀಸಲಿರಿಸಲಾಗಿತ್ತು. ಸರ್ಕಾರದ ನಿರ್ದೇಶನವನ್ನ ಗಾಳಿಗೆ ತೂರಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಗದಾಗಿ ಪರಿವರ್ತಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.
2024ರ ಬಳ್ಳಾರಿ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ವಾಲ್ಮೀಕಿ ನಿಗಮದ 20.19 ಕೋಟಿ ರೂಪಾಯಿ ನಾಗೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಖರ್ಚಿನ ಜೊತೆಗೆ ವೈಯಕ್ತಿಕ ಬಳಕೆಗೆ ವಿನಿಯೋಗಿಸಿಕೊಂಡಿದ್ದಾರೆ. ಮಾಜಿ ಸಚಿವರ ಮನೆ ಮೇಲೆ ನಡೆಸಿದ ದಾಳಿ ವೇಳೆಗೆ ಕೆಲ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಗೇಂದ್ರ ಆಪ್ತ ವಿಜಯ್ ಕುಮಾರ್ ಮೊಬೈಲ್ ಫೋನ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದಾಗ ಹಣ ಹಂಚಿಕೆ ಅವ್ಯವಹಾರ ಮಾಡಿರುವುದು ಕಂಡುಬಂದಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ನಾಗೇಂದ್ರ ಮೊಬೈಲ್ ನಾಶ ಪಡಿಸುವುದಲ್ಲದೆ ಇನ್ನಿತರ ಆರೋಪಿಗಳಿಗೆ ಕೃತ್ಯದ ಬಗ್ಗೆ ಬಾಯ್ಬಿಡದಂತೆ ಬೆದರಿಸಿದ್ದರು ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ: ಮಾಜಿ ಸಚಿವ ನಾಗೇಂದ್ರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಇ.ಡಿ.