ಬೆಂಗಳೂರು: ಬಾಲಕಿಯನ್ನು ಹತ್ಯೆಗೈದು ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಮೃತದೇಹ ಎಸೆದಿರುವ ಘಟನೆ ಇಂದು ಮುಂಜಾನೆ ವರದಿಯಾಗಿದೆ. 5-6 ವರ್ಷದ ಬಾಲಕಿಯ ಮೃತದೇಹವಾಗಿದ್ದು, ವಿವರ ಇನ್ನೂ ಲಭ್ಯವಾಗಿಲ್ಲ. ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆಗೈದು ನಂತರ ಮೃತದೇಹ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಕ್ಯಾಶಿಯರ್ ನೀಡಿದ ಮಾಹಿತಿಯನ್ವಯ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಬೇರೆ ಯಾವುದೋ ಸ್ಥಳದಲ್ಲಿ ಹತ್ಯೆಗೈದು ಮೃತದೇಹವನ್ನು ತಂದು ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳಕ್ಕೆ ಎಫ್ಎಸ್ಎಲ್ ಹಾಗೂ ಸೀನ್ ಆಫ್ ಕ್ರೈಂ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
"ಮೃತ ಬಾಲಕಿಯ ಕಡೆಯವರು ಯಾರೂ ಪತ್ತೆಯಾಗಿಲ್ಲ. ಆದರೆ ಬಾಲಕಿ ಭಿಕ್ಷಾಟನೆಯಲ್ಲಿ ತೊಡಗಿರುತ್ತಿದ್ದುದನ್ನು ಗಮನಿಸಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರ ಕುರಿತು ತಕ್ಷಣಕ್ಕೆ ನಿರ್ಧರಿಸಲು ಸಾಧ್ಯವಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ತಿಳಿಯಲಿದೆ. ಸದ್ಯ ಬೆಂಗಳೂರು ಕೇಂದ್ರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಂಡಿದ್ದೇವೆ" ಎಂದು ರಾಜ್ಯ ರೈಲ್ವೇ ಎಸ್ಪಿ ಡಾ. ಸೌಮ್ಯಲತಾ ಎಸ್.ಕೆ. ತಿಳಿಸಿದರು.
ಇದನ್ನೂ ಓದಿ: ಹೃದಯವಿದ್ರಾವಕ! ರೈಲಿನ ಡಸ್ಟ್ ಬಿನ್ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ - New Born Baby Dead Body Found