ಬೆಂಗಳೂರು: 2006ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆ ಆಗಿದ್ದರಿಂದಲೇ ಈ ನಾಡಿಗೆ ಕುಮಾರಸ್ವಾಮಿ ಪರಿಚಯ ಆದರು. ಆಗ ನನಗಿಂತ ಹಿರಿಯರಾದ ಯಡಿಯೂರಪ್ಪ ಅವರು ನನಗೆ ಸಹಕಾರ ನೀಡಿ, ಮುಕ್ತವಾಗಿ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದರು. ಅಂದು ಮೈತ್ರಿ ಮುಂದುವರೆಸಬೇಕು ಎನ್ನುವುದು ನನ್ನ ಸ್ವಂತ ಇಚ್ಛೆಯಾಗಿತ್ತು. ಆದರೆ, ಕೆಲವರ ಕುತಂತ್ರದಿಂದ ಅಧಿಕಾರ ಹಸ್ತಾಂತರ ಆಗಲಿಲ್ಲ. ಅದು ನನ್ನ ತಪ್ಪಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದಿನ ಮೈತ್ರಿ ಕುರಿತ ನೆನಪು ಮೆಲಕು ಹಾಕಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಜನ ಎನ್‍ಡಿಎ ಸಂಸದರ ಸನ್ಮಾನ, ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು. 2006ರಲ್ಲಿ ನಮ್ಮ ಹೊಂದಾಣಿಕೆ ಮುಂದುವರಿದಿದ್ದರೆ ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಇರುತ್ತಿರಲಿಲ್ಲ. ಸಂಪೂರ್ಣ ನೆಲಕಚ್ಚಿ ಹೋಗುತ್ತಿತ್ತು ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.
ನಮ್ಮದು ಸಹಜ ಮೈತ್ರಿ: ಜೆಡಿಎಸ್ ಬಿಜೆಪಿಯದ್ದು ಸಹಜ ಮೈತ್ರಿ. 2018ರಲ್ಲೂ ನನಗೆ ಬಿಜೆಪಿ ಜೊತೆ ಸೇರಿಯೇ ಸರ್ಕಾರ ಮಾಡುವ ಆಸಕ್ತಿ ಇತ್ತು. ಈಗ ಮುಕ್ತವಾಗಿ ಎಲ್ಲಾ ವಿಷಯಗಳನ್ನು ಚರ್ಚೆ ಮಾಡುವುದಿಲ್ಲ. ಅದು ಮುಗಿದು ಹೋಗಿರುವ ಪ್ರಸಂಗ. ಆಗಿರುವ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ಅವರು ಎಲ್ಲೆಡೆ ಓಡಾಟ ಮಾಡಿದ್ದಾರೆ. 82ರ ವಯಸ್ಸಿನಲ್ಲಿಯೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದು, ಅವರಿಗೆ ನಾನು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೈತ್ರಿ ಮುಂದುವರಿಯಲಿದೆ: ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಬೇಕು. ಮೈಸೂರು ಪಾಲಿಕೆ ಚುನಾವಣೆ ಇರಬಹುದು, ಮುಂಬರುವ ಯಾವುದೇ ಚುನಾವಣೆ ಹೊಂದಾಣಿಕೆ ಇರಬಹುದು. ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಹೋಗಬೇಕಿದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೂ ನಾವು ಸಜ್ಜಾಗಬೇಕಿದೆ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.
ನಮ್ಮಲ್ಲಿ ಯಾವುದೇ ಒಡಕು ತರಬಾರದು. ನಮ್ಮಲ್ಲಿ ಯಾರೂ ಹೆಚ್ಚು ಕಡಿಮೆ ಎನ್ನುವ ಪ್ರಶ್ನೆ ಇಲ್ಲ. ಒಂದು ಕುಟುಂಬದ ಅಣ್ಣ ತಮ್ಮಂದಿರ ರೀತಿ ಹೋಗಬೇಕು. ಯಾರೇ ಒಗ್ಗಟ್ಟು ಮುರಿಯಲು ಮುಂದಾದರೆ ಅದನ್ನು ಕಿವಿ ಮೇಲೆ ಹಾಕಿಕೊಳ್ಳಬಾರದು ಎಂದು ಸಚಿವರು ಸಲಹೆ ನೀಡಿದರು.
ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ಗ್ಯಾರಂಟಿಗಳೇ ಬೆಲೆ ಏರಿಕೆಗೆ ಮೂಲ: ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಜನರನ್ನು ದೋಚುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಬೆಲೆಗಳ ಏರಿಕೆಗೆ ಗ್ಯಾರಂಟಿಗಳೇ ಕಾರಣ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಪ್ರಹಾರ ನಡೆಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಪಾಲ್ಗೊಂಡಿದ್ದರು. ಅಲ್ಲದೆ, ಜೆಡಿಎಸ್ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಎಲ್ಲಾ ಸಂಸದರು ಭಾಗಿಯಾಗಿ ಅಭಿನಂದನೆ ಸ್ವೀಕರಿಸಿದರು.