ಬೆಂಗಳೂರು : ಈಗಾಗಲೇ ಕೋರ್ಟ್ ಶಾಸಕ ಸತೀಶ್ ಸೈಲ್ರನ್ನು ದೋಷಿ ಎಂದು ತೀರ್ಪು ಕೊಟ್ಟಿದೆ. ಇವತ್ತು ಏಳು ವರ್ಷ ಶಿಕ್ಷೆ ಪ್ರಕಟಿಸಿದೆ. ಹಾಗಾಗಿ, ಸರ್ಕಾರ ಕೂಡಲೇ ಸತೀಶ್ ಸೈಲ್ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಎರಡು ವರ್ಷ ಶಿಕ್ಷೆಯಾದ್ರೆ ಶಾಸಕ ಸ್ಥಾನ ಉಳಿಯಲ್ಲ. ಹೀಗಾಗಿ, ಸರ್ಕಾರ ಹಾಗೂ ಸ್ಪೀಕರ್ ಅವರಿಗೆ ಒತ್ತಾಯ ಮಾಡುತ್ತೇನೆ. ಈ ತಕ್ಷಣ ಅವರ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದರು.
''ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ ಅವರು, ವಿಜಯಪುರದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರೋದು ಅತ್ಯಂತ ಗಂಭೀರ ವಿಚಾರ. ಸರ್ಕಾರ ವಕ್ಫ್ ಬೋರ್ಡ್ಗೆ ಹೇಳಿ ಆ ನೋಟಿಸ್ ವಾಪಸ್ ಪಡೆಯಲಿ ಹಾಗೂ ಅದು ರೈತರ ಜಮೀನು ಅಂತ ಘೋಷಿಸಬೇಕು. ನಾವು ಯಾವುದೇ ರೈತರ ಜಮೀನು ವಶಪಡಿಸಿಕೊಳ್ಳಲ್ಲ ಅಂತ ಘೋಷಣೆ ಮಾಡಬೇಕೆಂದು'' ಆಗ್ರಹಿಸಿದರು.
''ರಾಜ್ಯದಲ್ಲಿ ಪಟಾಕಿ ಸಿಡಿಸಲು ಹಾಗೂ ಮಾರಾಟಕ್ಕೆ ಸರ್ಕಾರದಿಂದ ನಿಯಮಾವಳಿ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂ ಹಬ್ಬಗಳಿಗೆ ಮಾತ್ರ ನಿಯಮ ಹಾಕುತ್ತಾರೆ. ಪಟಾಕಿ ಹಚ್ಚೋದಿಕ್ಕೆ, ಗಣಪತಿ ಕೂರಿಸಲು ನಿಯಮ ಮಾಡ್ತಾರೆ. ಆದರೆ, ಬೆಳಗಿನಜಾವ 5 ಗಂಟೆಗೆ ಮಸೀದಿಗಳಲ್ಲಿ ಆಜಾನ್, ನಮಾಜ್ ಶುರುವಾಗುತ್ತದೆ. ಇದಕ್ಕೆ ಸರ್ಕಾರದ ನಿಯಮ ಅನ್ವಯ ಆಗೋದಿಲ್ವಾ?'' ಎಂದು ಪ್ರಶ್ನಿಸಿದರು.
ಹಿಂದೂ ಹಬ್ಬಗಳಿಗೆ ಮಾತ್ರ ಇವರ ಪುರುಷತ್ವ ಮತ್ತು ಆರ್ಭಟ ಇರುತ್ತದೆ. ಪಟಾಕಿ ಸಿಡಿಸುವವರು ಸಿಡಿಸೇ ಸಿಡಿಸ್ತಾರೆ, ಯಾರೂ ಇವರ ಮಾತು ಕೇಳಲ್ಲ ಎಂದರು.
ಇದನ್ನೂ ಓದಿ : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ ಸೇರಿ ಏಳು ಮಂದಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ