ಬೆಂಗಳೂರು: ಕಾನೂನು ಕೈಗೆ ತೆಗೆದುಕೊಳ್ಳುವುದು ನಿಮ್ಮಂಥವರಿಗೆ ಶೋಭೆ ತರುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಬಯಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಘಟನೆಯನ್ನು ಖಂಡಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಮುನಿರತ್ನ ಅವರ ಮೇಲೆ ಆರೋಪಗಳಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಕೋರ್ಟ್ ಜಾಮೀನು ಕೊಟ್ಟಿದೆ. ಆದರೆ, ಅವರ ಕ್ಷೇತ್ರಕ್ಕೆ ಹೋಗಬಾರದೆಂದು ಹೇಳಿದೆಯೇ ಎಂದು ಪ್ರಶ್ನಿಸಿದರು.
ಮುನಿರತ್ನ ಅವರು ತಮ್ಮ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಕ್ರಮ ಮಾಡುತ್ತಿದ್ದರು. ಅಲ್ಲಿ ಅವರಿಗೆ ಮೊಟ್ಟೆ ಎಸೆದಿದ್ದಾರೆ ಎಂದ ಅವರು, ಅದು ಮುನಿರತ್ನ ಇರಲಿ, ಈಗ ಚರ್ಚೆ ನಡೆಯುತ್ತಿರುವ ಸಿ.ಟಿ.ರವಿಯವರ ಪ್ರಕರಣವೇ ಇರಲಿ. ಕೋರ್ಟ್ ನಿರ್ಧಾರ ಮಾಡಲಿ ಎಂದರು.
ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಪೂರ್ವಜರಾದ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಥರದ ಕೆಲ ವ್ಯಕ್ತಿಗಳಂತೆ ಮಾಡುವುದು ಸರಿಯಲ್ಲ. ನೀವು ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡುವುದು, ಮೊಟ್ಟೆ ಎಸೆಯುವುದು ಖಂಡನೀಯ. ಇವತ್ತಿಗೂ ಸಿ.ಟಿ. ರವಿಯವರ ದೂರು ಆಧರಿಸಿ ಎಫ್‍ಐಆರ್ ದಾಖಲಿಸಿಲ್ಲ; ಸ್ವಯಂಪ್ರೇರಿತ ಆಗಿದೆ ಎನ್ನುತ್ತಾರೆ ಎಂದು ಜೋಶಿ ಹರಿಹಾಯ್ದರು.
ಯಾಕೆ ದೂರು ದಾಖಲಿಸಿಲ್ಲ ಎಂದು ವಕೀಲರು ಕೇಳಿದರೆ ಕಮಿಷನರ್, ಸಿಐಡಿಗೆ ವರ್ಗಾವಣೆ ಆಗಿದೆ ಎನ್ನುತ್ತಾರೆ. ಆದರೆ, ನೀವು ಎಫ್‍ಐಆರ್ ಮಾಡಿ ಪ್ರಕರಣ ವರ್ಗಾಯಿಸಬೇಕು. ಖಾನಾಪುರದ ಸಬ್ ಇನ್‍ಸ್ಪೆಕ್ಟರ್ ಮಂಜುನಾಥ ನಾಯಕ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.
ಭಯ ಹುಟ್ಟಿಸುವ ಕೆಲಸ ನಡೆದಂತಿದೆ. ಸಿ.ಟಿ. ರವಿಯವರನ್ನು ಮಾತನಾಡಿಸಬಾರದೆಂದು ಆರ್.ಅಶೋಕ್, ವಿಜಯೇಂದ್ರ ಮತ್ತು ವಕೀಲರನ್ನು ಹೊರಗಡೆ ಕೂರಿಸಿದ್ದರು. ಕಾಂಗ್ರೆಸ್ಸಿನವರು ಯಾವ ಕಾಲದಲ್ಲಿದ್ದಾರೆ? ಕಮಿಷನರ್ ಬಂದು ಮಾತನಾಡಿಲ್ಲ ಎಂದು ಜೋಶಿ ದೂರಿದರು.
ಈ ರೀತಿಯ ನಡವಳಿಕೆಯನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಲು ಸಾಧ್ಯವಿಲ್ಲ; ಪ್ರಜಾಪ್ರಭುತ್ವದಲ್ಲಿ ಕಾನೂನಿನ ಪ್ರಕಾರ, ಸಂವಿಧಾನದನ್ವಯ ನಡೆದುಕೊಳ್ಳಬೇಕು. ನೆಹರೂ ಕಾಲದಿಂದ ಈಗಿನವರೆಗೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿದ್ದಾರೆ ಎಂದು ದೂರಿದರು.
ಜನಪ್ರತಿನಿಧಿ ಮೇಲೆ ದಬ್ಬಾಳಿಕೆ ಖಂಡನೀಯ: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಅಧಿಕಾರ ಇದೆಯೆಂದು ಜನಪ್ರತಿನಿಧಿ ಮೇಲೆ ದಬ್ಬಾಳಿಕೆ ಮಾಡುವುದು, ಅವಮಾನಿಸುವುದು ಖಂಡನೀಯ; ಇದನ್ನು ಯಾರೂ ಒಪ್ಪಲಾಗದು ಎಂದು ತಿಳಿಸಿದರು.
ಖಾನಾಪುರ ಸಬ್ ಇನ್‍ಸ್ಪೆಕ್ಟರ್ ಅಮಾನತು ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಒಂದೆಡೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ನಡೆದಿದೆ; ಅಧಿಕಾರದ ದರ್ಪ, ಮದ ನೆತ್ತಿಗೇರಿದರೆ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನು ಇದು ತೋರಿಸಿಕೊಡುತ್ತಿದೆ ಎಂದು ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರ ಮೇಲೆ ನೀವು ಕ್ರಮ ಕೈಗೊಳ್ಳಲಿಲ್ಲ; ಮೊನ್ನೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರಬೇಕಾದರೆ ಶಾಸಕರ ಮೇಲೆ ಹಲ್ಲೆ ಮಾಡಲು ಗೂಂಡಾಗಳು ನುಗ್ಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಸರ್ಕಾರವು ಅಧಿಕಾರ ಇದೆಯೆಂದು ಮನಬಂದಂತೆ ನಡೆದುಕೊಳ್ಳುತ್ತಿದೆ. ಇದು ಖಂಡನೀಯ. ಮುನಿರತ್ನ ಅವರ ಜೊತೆ ಮಾತನಾಡುವುದಾಗಿ ಅವರು ಪ್ರಶ್ನೆಗೆ ಉತ್ತರ ನೀಡಿದರು.
ಇದನ್ನೂ ಓದಿ: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ: ಮೂವರು ಕಿಡಿಗೇಡಿಗಳ ಬಂಧನ - EGG ATTACK ON BJP MLA MUNIRATHNA