ಬೆಂಗಳೂರು: ಮೊದಲು ವರ್ಗಾವಣೆಯಲ್ಲಿ ಹಣ ಪಡೆಯುವುದನ್ನು ನಿಲ್ಲಿಸಬೇಕು. ದುಡ್ಡು ಕೊಟ್ಟು ಬಂದವನು ಡ್ಯಾಂ ಏನಾಗಿದೆ ಅಂತಾ ನೋಡ್ತಾನಾ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಗರದ ಹೆಚ್‌ಎಂಟಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂಗೆ 70 ವರ್ಷ ಆಗಿದೆ. ಇದು ಟಿಬಿ ಬೋರ್ಡ್ಗೆ ಬರುತ್ತದೆ. ಆಂಧ್ರ ಪ್ರದೇಶ, ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ. ಈ ಕುರಿತು ರಿಪೋರ್ಟ್ ಕೊಡುವುದಕ್ಕೆಂದು ಒಂದು ಕಮಿಟಿ ಇದೆ. 122 ಟಿಎಂಸಿ ನಮ್ಮ ರಾಜ್ಯಕ್ಕೆ ಸಿಗಬೇಕು, 73 ಟಿಎಂಸಿ ನೀರು ಆಂಧ್ರಕ್ಕೆ ಸಿಗಬೇಕು. 103 ಟಿಎಂಸಿ ಈಗ ಸಿಗುತ್ತಿದೆ ಎಂದರು.
ಅಧಿಕಾರಿಗಳ ವರ್ಗಾವಣೆ, ಪೋಸ್ಡಿಂಗ್ಗೆ ಹಣ ಪಡೆಯುವುದನ್ನು ನಿಲ್ಲಿಸಿ. 14 ತಿಂಗಳ ಅನುಭವ ನನಗಿದೆ. ಅವರು ಹೇಳಬೇಕು, ನಾನು ಸಹಿ ಹಾಕಬೇಕು ಎನ್ನುವ ಪರಿಸ್ಥಿತಿ ಇತ್ತು. ಅಧಿಕಾರಿಗಳಲ್ಲಿ ವಿಶ್ವಾಸ ಇರಬೇಕು ಎಂದು ವಾಗ್ದಾಳಿ ನಡೆಸಿದರು. ಚೀಫ್ ಇಂಜಿನಿಯರ್ ನೇಮಕ ಮಾಡುವುದಕ್ಕೆ ಎಷ್ಟೆಷ್ಟು ಫಿಕ್ಸ್ ಮಾಡಿದ್ದೀರಾ, ಅದನ್ನು ನಿಲ್ಲಿಸಿ. ಇದನ್ನೆಲ್ಲಾ ನಾನು ಅನುಭವಿಸಿದ್ದೇನೆ. ಎಂಡಿ, ಚೀಫ್ ಇಂಜಿನಿಯರ್ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಈಗ ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಆಗುವುದು ಬೇಡ. ರೈತರಿಗೆ ಕಾನ್ಫಿಡೆನ್ಸ್ ಬರುವಂತೆ ಮಾಡಿ. ನಿಮ್ಮ ಊಹೆ ಮೇಲೆ ನಿರ್ಧಾರ ಮಾಡಿ ರೈತರ ಬೆಳೆ ನಷ್ಟ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ನಮ್ಮ ಸುಪರ್ದಿಯಲ್ಲಿರುವ 19ನೇ ಗೇಟ್ನ ಚೈನ್ ಕಟ್ ಆಗಿದೆ. ಸೇಫ್ಟಿ ಕಮಿಟಿ ನೆಪಕ್ಕೆ ಪರಿಶೀಲನೆ ಮಾಡ್ತಾರೆ. ವಾರ್ಷಿಕ ಲೂಬ್ರಿಕೇಶನ್ನಲ್ಲಿ ತಪ್ಪಾಗಿದೆ ಎಂಬ ಚರ್ಚೆ ಇದೆ. 2021ರಲ್ಲಿ ಕೇಂದ್ರ ಸರ್ಕಾರವು ಡ್ಯಾಮ್ ಸೆಕ್ಯುರಿಟಿ ಕಾನೂನು ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಚೀಫ್ ಇಂಜಿನಿಯರ್ ಇರಬೇಕು. ನಾರಾಯಣಪುರ ಡ್ಯಾಮ್ ತರಾತುರಿಯಲ್ಲಿ ಗುಂಡೂರಾವ್ ಉದ್ಘಾಟಿಸಿದರು. ಎರಡು ಗೇಟ್ ತನಿಖೆ ಆಗಿತ್ತು. ಅದರ ವರದಿಯಲ್ಲಿ ಕ್ರಮಗಳ ಉಲ್ಲೇಖವಿದೆ. ಆಲಮಟ್ಟಿಯಲ್ಲಿ ದೇವೇಗೌಡರು ಉತ್ತಮ ಗೇಟ್ ಅಳವಡಿಸಿದ್ದಾರೆ. ವಿಶ್ವಬ್ಯಾಂಕ್ ಪ್ರಮಾಣಪತ್ರ ಕೂಡ ಕೊಟ್ಟಿದೆ ಎಂದು ಹೇಳಿದರು.
ಶೀಘ್ರವೇ ಒಳ್ಳೆಯ ಸುದ್ದಿ: ಪ್ರಧಾನಿಗಳ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು? ಯಾವಾಗ? ಎಂದು ಈಗಲೇ ಹೇಳಲಾರೆ. ಅದು ಯಶಸ್ವಿಯಾದರೆ ಪ್ರಧಾನಿಗಳಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ ಹಂತವಾಗಿ ಸರಿ ಹೋಗುತ್ತವೆ. ಆ ಪ್ರಯತ್ನದಲ್ಲಿ ನಾನು ಇದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ವಿಷಯ ಹೇಳಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಘೋರ ದುರಂತ ತಪ್ಪಿಸಿದ ಖಾಫ್ರಿ, ಕಾಳಿ: ಜೀವಹಾನಿ ತಡೆದವೇ ದೈವಗಳು? - Kali Bridge Collapse Update