ಮಂಡ್ಯ : ಕೆಲ ತಿಂಗಳ ಹಿಂದೆ ಭತ್ತದ ನಾಟಿ ಹಾಕಿದ್ದ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿನ ಜಮೀನಿಗೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರಿಂದು ಭೇಟಿ ನೀಡಿ ಪರಿಶೀಲಿಸಿದರು. ನಂತರ ನಾಟಿ ಹಾಕಿದ್ದ ರೈತ ಮಹಿಳೆಯರ ಜೊತೆ ಕುಳಿತು ನಾಟಿ ಕೋಳಿ ಮುದ್ದೆ ಊಟ ಸವಿದರು.
ಜಮೀನಿನ ಬಳಿಗೆ ಆಗಮಿಸಿದ ಹೆಚ್ಡಿಕೆ ಅವರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ರೈತ ಮಹಿಳೆಯರ ಜೊತೆ ಕುಳಿತು ನಾಟಿ ಕೋಳಿ ಸಾರು, ಮುದ್ದೆ ಸವಿದರು. ಈ ವೇಳೆ ಹೆಚ್ಡಿಕೆಗೆ ಮಾಜಿ ಸಚಿವ ಸಿ. ಎಸ್ ಪುಟ್ಟರಾಜು ಸಾಥ್ ನೀಡಿದರು.
ಈ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿ, ಎರಡೂವರೆ ತಿಂಗಳ ಹಿಂದೆ ಭತ್ತದ ನಾಟಿಯಲ್ಲಿ ಭಾಗವಹಿಸಿದ್ದೆ. ಒಳ್ಳೆಯ ಬೆಳೆಯಾಗಿದ್ದು, ಫಲವನ್ನ ನೋಡೋದೇ ಸಂತೋಷ. ರೈತರಿಗೆ ನ್ಯಾಯಯುತ ಬೆಲೆ ಕೊಡಬೇಕು. ಕೆಲವು ಬೆಳೆಗಳಿಗೆ ಕೇಂದ್ರ ಸರ್ಕಾರ ಎಂಎಸ್‌ಪಿ ದರ ಏರಿಕೆ ಮಾಡಿದೆ. ರೈತರ ಪರವಾಗಿ ಸರ್ಕಾರದ ಗಮನ ಸೆಳೆಯುತ್ತೇನೆ. ಹೊಲ ಗದ್ದೆಯಲ್ಲಿ ಕೆಲಸ ಮಾಡುವಾಗ ಒಟ್ಟಿಗೆ ಸಾಮೂಹಿಕ ಊಟ ಮಾಡುವುದು ಸಂಪ್ರದಾಯ. ಅದು ಇಂದು ನನಗೆ ನೆನಪಿಗೆ ಬರುತ್ತಿದೆ. ಹಿಂದೆ ನೆಲದಲ್ಲಿ ಕುಳಿತು ಊಟ ಮಾಡ್ತಿದ್ವಿ. ಇವತ್ತು ಟೇಬಲ್, ಕುರ್ಚಿ ಮೇಲೆ ಊಟ ಕೊಟ್ಟಿದ್ದಾರೆ. ಭತ್ತದ ಕಟಾವು ಹಾಗೂ ರಾಶಿ ಪೂಜೆಗೆ ಬರ್ತೀನಿ ಎಂದು ಹೇಳಿದರು.
ಚನ್ನಪಟ್ಟಣ ಮೈತ್ರಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೆಹಲಿ ಮಟ್ಟದಲ್ಲಿ ಚನ್ನಪಟ್ಟಣ ಟಿಕೆಟ್ ಸಮಸ್ಯೆ ಇಲ್ಲ. ಕಳೆದ ಎರಡು ಬಾರಿ ಚನ್ನಪಟ್ಟಣದಲ್ಲಿ ನಾನು ಪ್ರತಿನಿಧಿಸಿದ್ದೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಅನ್ನೋದು ದೆಹಲಿ ಮಟ್ಟದಲ್ಲಿ ಇದೆ. ಮೂರು ಉಪಚುನಾವಣೆ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ.
ಗೆಲ್ಲುವ ದೃಷ್ಟಿಯಿಂದ ಬಿಜೆಪಿಗೆ ಬೆಂ. ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಟ್ವಿ. ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೆವು. ಆ ರೀತಿ ಔದಾರ್ಯ ಅವರ ಕಡೆಯಿಂದಲೂ ಬರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿ.ಪಿ.ವೈ ಜೆಡಿಎಸ್ ಚಿಹ್ನೆಯಡಿ ನಿಲ್ಲಲಿ ಎಂದು ಹೇಳಿದರು.
ನಾಮಪತ್ರ ಸಲ್ಲಿಸುತ್ತಿರುವುದು ನನಗೆ ಗೊತ್ತಿಲ್ಲ : ಸಿ. ಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸುತ್ತಿರುವ ವಿಚಾರಕ್ಕೆ ಮಾತನಾಡಿ, ನಾಮಪತ್ರ ಸಲ್ಲಿಸುವ ವಿಚಾರ ನನ್ನೊಂದಿಗೆ ಚರ್ಚೆಯಾಗಿಲ್ಲ. ನಾಮಪತ್ರ ಸಲ್ಲಿಸುತ್ತಿರುವುದು ನನಗೆ ಗೊತ್ತಿಲ್ಲ. ನನ್ನ ಮುಂದೆ ಆ ಕುರಿತು ಪ್ರಸ್ತಾಪವೂ ಬಂದಿಲ್ಲ. ಮಾಧ್ಯಮಗಳಲ್ಲಿ ಆ ಕುರಿತು ವರದಿ ಬಂದಿರುವುದನ್ನು ನೋಡಿದ್ದೇನೆ. ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗ್ತಾರೆ ಎಂಬ ವಿಚಾರ 15 ದಿವಸದಿಂದ ಓಡಾಡ್ತಿದೆ. ಕಾಂಗ್ರೆಸ್ನವರು ತಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಲು ಕಾಯ್ತಿದ್ದಾರೆ ಎಂದು ಹೇಳಿದರು.
ಮಂಗಳವಾರ ಟಿಕೆಟ್ ಫೈನಲ್ ಆಗುತ್ತೆ : ನಮ್ಮಲ್ಲಿ ಒಡಕು ಮೂಡಲಿ ಎಂದು ಬಕಪಕ್ಷಿ ರೀತಿ ಕಾಯ್ತಿದ್ದಾರೆ. ಸ್ವತಂತ್ರವಾಗಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಒಡಕು ತರಲು ಶ್ರಮ ಹಾಕ್ತಿದ್ದಾರೆ. ಅಂತಹ ಅವಕಾಶ ಕಲ್ಪಿಸಬಾರದೆಂದು ತಾಳ್ಮೆಯಲ್ಲಿದ್ದೇನೆ. ಇನ್ನೂ ನಾಲ್ಕು ದಿನ ಇದೆ, ಕುಳಿತು ಚರ್ಚೆ ಮಾಡ್ತೇವೆ. ಮಂಗಳವಾರ ಟಿಕೆಟ್ ಫೈನಲ್ ಆಗುತ್ತೆ ಎಂದು ತಿಳಿಸಿದರು. ಬಳಿಕ ನಟ ಸುದೀಪ್ ತಾಯಿ ನಿಧನಕ್ಕೆ ಕುಮಾರಸ್ವಾಮಿ ಸಂತಾಪ ಸೂಚಿಸಿದರು.
ಇದನ್ನೂ ಓದಿ : ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಯಾರಿಗೆ ಬೇಕೋ ಅವರಿಗೆ ಟಿಕೆಟ್ ಘೋಷಣೆ ಮಾಡಿಕೊಳ್ತಾರೆ : ಬಿಎಸ್ವೈ