ರಾಮನಗರ: "ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ" ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ" ಎಂದರು.
"ಎಫ್ಐಆರ್ ಪ್ರತಿಯನ್ನು ಓದಿದೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಯಿತು. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಟಿ ನಡೆಸಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಿ ಎಂದು ಅಲ್ಲಿ ದೂರುದಾರರೇ ಹೇಳಿಕೊಂಡಿದ್ದಾರೆ" ಎಂದು ತಿಳಿಸಿದರು.
ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ: "ನಾನು ಮಾಧ್ಯಮಗೋಷ್ಟಿ ಮಾಡಿದೆ ಎಂದು ಎಫ್ಐಆರ್ ಮಾಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದರು ಎಂದು ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಹಾಗಾದರೆ, ಯಾರೂ ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯಾ?. ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ" ಎಂದು ಕಿಡಿಕಾರಿದರು.
"ಇದೊಂದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ. ಯಾವಾಗ ಚನ್ನಪಟ್ಟಣದಲ್ಲಿ ಇವರ ಮೋಸ ಕುತಂತ್ರ ನಡೆಯಲ್ಲ ಎಂದು ಗೊತ್ತಾಯಿತೋ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಗೌರವ ಇದೆ. ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ. ಹೀಗಿರುವಾಗ ಇಂತಹ ನೂರು ಎಫ್ಐಆರ್ಗಳು ದಾಖಲಾದರೂ ನಾವು ಧೃತಿಗೆಡಲ್ಲ" ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಎಡಿಜಿಪಿ ದೂರಿನಲ್ಲೇನಿದೆ: ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಲೋಕಾಯುಕ್ತ ಎಸ್ಐಟಿ ವಿಭಾಗದ ಮುಖ್ಯಸ್ಥ, ಎಡಿಜಿಪಿ ಚಂದ್ರಶೇಖರ್ ಅವರು ನೀಡಿರುವ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ದುರುದ್ದೇಷಪೂರಿತ ಹೇಳಿಕೆಗಳನ್ನು ನೀಡಿರುವ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು, ''ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಕರ್ನಾಟಕ ಕೇಡರ್ನಲ್ಲಿ ಮುಂದುವರೆಯುತ್ತಿರುವುದಾಗಿ ಹಾಗೂ ಲಂಚ ಪಡೆಯುತ್ತಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಕುಮಾರಸ್ವಾಮಿಯವರು ನನ್ನನ್ನು ಕರ್ನಾಟಕ ಕೇಡರ್ನಿಂದ ಅನ್ಯರಾಜ್ಯಕ್ಕೆ ವರ್ಗಾವಣೆ ಮಾಡಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ. ಹಾಗೂ ಅವರ ಆಪ್ತರಾದ ಸುರೇಶ್ ಬಾಬುರವರು ನನ್ನ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸುಳ್ಳು ದೂರು ನೀಡಿದ್ದಾರೆ'' ಎಂದು ತಮ್ಮ ದೂರಿನಲ್ಲಿ ಎಡಿಜಿಪಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಹೆಚ್.ಡಿ.ಕೆ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್