ಬೆಂಗಳೂರು: ‘ಮೈ ಟ್ಯಾಕ್ಸ್ ಮೈ ರೈಟ್’ ಎಂದು ಬೆಂಗಳೂರಿಗರು ಬೆಂಗಳೂರಿನ ಅಭಿವೃದ್ಧಿಗೆ ತೆರಿಗೆ ಹಣ ವಾಪಸ್ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು? ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮೈ ಟ್ಯಾಕ್ಸ್ ಮೈ ರೈಟ್ ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ, ಅದು ದೇಶದ ಹಿತ ಆಗಲಾರದು ಎಂದರು.
ಜಿಡಿಪಿಗೆ ಹೋಲಿಸಿದರೆ ನಮ್ಮ ದೇಶದ ವಿದೇಶಿ ಸಾಲ ಪ್ರಮಾಣ ಕಡಿಮೆ. ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ರೂಪಾಯಿ ಬೇಕು. ಹಣ ಎಲ್ಲಿಂದ ತರುತ್ತಾರೆ. ಇನ್ನು ಅಭಿವೃದ್ಧಿ ಕಾರ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದನ್ನು ನೆನಪಿಸಿದ ಅವರು, ಮುಖ್ಯಮಂತ್ರಿಗಳ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು 58 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗಾಗಿ ವ್ಯಯಿಸಿದ್ದಾಗಿ ಹೇಳಿ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿದ್ದನ್ನು ತಿಳಿಸಿದ್ದರು. ಹಿಮಾಚಲ ಪ್ರದೇಶ ಮತ್ತಿತರ ಕಡೆ ಕಾಂಗ್ರೆಸ್ಸಿನವರು ಗ್ಯಾರಂಟಿ ಭರವಸೆ ನೀಡಿದ್ದರು. ಹಿಮಾಚಲ ಪ್ರದೇಶದಲ್ಲಿ ಒಪಿಎಸ್- ಎನ್‍ಪಿಎಸ್ ಕುರಿತ ಸಂವಾದದ ವೇಳೆ ಒಪಿಎಸ್ ಜಾರಿ ತರುವುದಾಗಿ ಹೇಳಿದ್ದರು. ಅದರೆ, ಅದು ಈಡೇರಲಿಲ್ಲ ಎಂದು ಕೇಂದ್ರ ಸಚಿವರು ಟೀಕಿಸಿದರು.
ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯದ ಕುರಿತು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದನ್ನು ಗಮನಕ್ಕೆ ತಂದ ಸಚಿವೆ ನಿರ್ಮಲಾ ಸೀತಾರಾಮನ್, ಅತ್ಯಾಚಾರ ಪ್ರಮಾಣ ಶೇ.72ರಷ್ಟು ಹೆಚ್ಚಾದ ಕುರಿತು ಆತಂಕ ವ್ಯಕ್ತಪಡಿಸಿದರು. ದೇಶದ ಬಗೆಗಿನ ದೂರದೃಷ್ಟಿ ಪ್ರಣಾಳಿಕೆಯಲ್ಲಿ ಇರಬೇಕಿತ್ತು. ದೇಶವನ್ನು 5 ವರ್ಷಗಳಲ್ಲಿ ಹೇಗೆ ಅಭಿವೃದ್ಧಿ ಪಡಿಸುತ್ತೇವೆ ಎಂದು ಇಂಡಿಯಾ, ಕಾಂಗ್ರೆಸ್ ತಿಳಿಸಿಲ್ಲ. 13 ಪಕ್ಷದವರೂ ಪ್ರಧಾನಿ ಆಗಲು ಬಯಸುತ್ತಾರೆ. ಆದರೆ, ನಮ್ಮ ಪ್ರಧಾನಿಯವರು ಸಬ್ ಕಾ ಪ್ರಯಾಸ್ ಮೇ ಬಿಜೆಪಿಗೆ 370 ಸೀಟು ಮತ್ತು ಎನ್‍ಡಿಎಗೆ 400 ಸೀಟು ಎಂದಿದ್ದಾರೆ. ಅಲ್ಲದೆ, ದೂರದೃಷ್ಟಿಯ ಯೋಜನೆಗಳನ್ನೂ ತಿಳಿಸಿದ್ದಾರೆ ಎಂದು ತಿಳಿಸಿದರು.