ಬೆಂಗಳೂರು: ನಗರದಲ್ಲಿ ಬಿಬಿಎಂಪಿಯಿಂದ ಅನಧಿಕೃತ ಫ್ಲೆಕ್ಸ್ಗಳ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆದಿದೆ. ಜೂನ್ 1 ರಿಂದ ನಿನ್ನೆಯವರೆಗೆ 3843 ಫ್ಲೆಕ್ಸ್, ಬ್ಯಾನರ್, ಎಲ್ಇಡಿ ಹಾಗೂ ಹೋರ್ಡಿಂಗ್ಸ್ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ 76 ದೂರು ದಾಖಲಿಸಿದ್ದು, ಅದರಲ್ಲಿ 48 ಎಫ್ಐಆರ್ ದಾಖಲಿಸಲಾಗಿದೆ. 75,000 ರೂ. ದಂಡ ವಿಧಿಸಲಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018 ಅಡಿ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು, ಎಲ್.ಇ.ಡಿ ಜಾಹೀರಾತುಗಳನ್ನು ಪ್ರದರ್ಶಿಸುವುದು, ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು/ಪ್ರಕಟಣೆಗಳ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟ ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಅನಧಿಕೃತವಾಗಿ ಜಾಹೀರಾತು ಅಳವಡಿಸದಂತೆ ಪಾಲಿಕೆ ಕೋರಿದೆ.
ದೂರು ನೀಡಲು ಸಹಾಯವಾಣಿ; ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ಮೇಲುಸೇತುವೆ ಸೇರಿದಂತೆ ಇನ್ನಿತರೆ ಕಡೆ ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದರಿಂದ ನಾಗರಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುತ್ತದೆ. ದೂರವಾಣಿ 1,533ಗೆ ಕರೆ ಮಾಡಿ ಅಥವಾ ವಾಟ್ಸಾಪ್ ಸಂಖ್ಯೆ 9480683939 ಗೆ ಛಾಯಾಚಿತ್ರದ ಸಮೇತ ದೂರು ನೀಡಬೇಕು ಎಂದು ಹೇಳಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರಿಕರು ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಾಪ್ ಸಂಖ್ಯೆ 9480683939 ಗೆ ಛಾಯಾಚಿತ್ರ ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಬ್ಯಾನರ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು ನೀಡಿದ್ದು, 48 ಎಫ್‌ಐಆರ್ ದಾಖಲಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಅದರಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸೇರಿದಂತೆ ಎಲ್ಲಾ 8 ವಲಯಗಳ ಅಧಿಕಾರಿಗಳ ಜೊತೆ ಪ್ರತಿನಿತ್ಯ ಪರಿಶೀಲನಾ ಸಭೆ ನಡೆಸುತ್ತಿದ್ದು, ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಸೂಚನೆ ನೀಡುವ ಜೊತೆಗೆ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ಸ್ ಹಾಕುವವರ ಮೇಲೆ ಎಫ್ಐಆರ್ ದಾಖಲಿಸಲು ಸೂಚಿಸಿದ್ದಾರೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.