ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಗೆ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಕೆಲಸಕ್ಕೆ ತೆರಳುವವರು, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಉಡುಪಿ ನಗರದ ಗುಂಡಿಬೈಲು, ಪಾಡಿಗಾರು, ಕರಂಬಳ್ಳಿ ಪ್ರದೇಶ, ಗುಂಡಿಬೈಲಿನ ಕೆನರಾ ಬ್ಯಾಂಕ್, ಕರಂಬಳ್ಳಿ ವೆಂಕಟರಮಣ ಲೇಔಟ್ ಬಳಿ ಭಾರಿ ಮಳೆಗೆ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹ ಗೊಂಡು ವಾಹನ ಸವಾರರು ಪರದಾಡಿದ್ದಾರೆ. ಇನ್ನು ಕೆಲೆವೆಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಧಾರಾಕಾರ ಮಳೆ ಮುಂದುವರಿದಿರುವುದರಿಂದ ಕೆಲವೆಡೆ ತಗ್ಗು ಪ್ರದೇಶದಲ್ಲಿ ಅಂಗಡಿ ಸೇರಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ನೀರನಲ್ಲಿ ಸಿಲುಕಿದ್ದವರನ್ನು ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ಮಾಡಿ ಎತ್ತರ ಪ್ರದಶಕ್ಕೆ ಸ್ಥಳಾಂತರಿಸಿದ್ದಾರೆ.
ಮಂಗಳೂರಿನಲ್ಲೂ ಭಾರೀ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಂಗಳೂರು ಮತ್ತು ಉಳ್ಳಾಲದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನದಿ ತೀರಗಳ ಪ್ರದೇಶಗಳಲ್ಲಿ ನೆರೆ ಭೀತಿ ಕಾಣಿಸಿಕೊಂಡಿದೆ. ಸಮುದ್ರ ಪ್ರಕ್ಷುಬ್ದಗೊಂಡಿದೆ. ಹವಾಮಾನ ಇಲಾಖೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ನಾಳೆ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಭಾರೀ ಮಳೆ: ಮಂಗಳೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ - School Holiday