ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಮಗಾರಿ ನಡೆಸುವಾಗ ಸೆಂಟ್ರಿಂಗ್ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಪೀಣ್ಯದ ಎನ್ಟಿಟಿಎಫ್ ರಸ್ತೆ ಬಳಿಯ ಐದು ಅಂತಸ್ತಿನ ಕಟ್ಟಡದ ಸೆಂಟ್ರಿಂಗ್ ಕಾಮಗಾರಿ ನಡೆಯುವಾಗ ಏಕಾಏಕಿ ಕುಸಿದಿದೆ. ಪರಿಣಾಮ ಇಲ್ಲಿ ಕೆಲಸ ಮಾಡುತ್ತಿದ್ದ ಯಾದಗಿರಿ ಮೂಲದ ಹಿಮಾಂಶು (28) ಸ್ಥಳದಲ್ಲೇ ಮೃತಪಟ್ಟರೆ, ಮಾರ್ಗ ಮಧ್ಯೆ ಕಲಬುರಗಿ ಮೂಲದ ವಿರೇಶ್ (30) ಸಾವನ್ನಪ್ಪಿದ್ದಾನೆ. ಮತ್ತೋರ್ವ ಕಾರ್ಮಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಗೋಮಾ ಎಲೈಟ್ಸ್ ಎಂಬ ಖಾಸಗಿ ಕಂಪನಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಐದನೇ ಅಂತಸ್ತಿಗೆ ಕಾಂಕ್ರಿಟ್ ಹಾಕಲು ಐದಾರು ಕಾರ್ಮಿಕರು ಇಂದು ಮಧ್ಯಾಹ್ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಸೆಂಟ್ರಿಂಗ್ ಕುಸಿದು ಬಿದ್ದಿದೆ. ಕಾರ್ಮಿಕರು ನಾಲ್ಕು ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾರೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಗೋಮಾ ಎಲೈಟ್ಸ್ ಎಂಬ ಖಾಸಗಿ ಕಂಪನಿ ಸೇರಿದ ಕಟ್ಟಡದಲ್ಲಿ ಕಾಮಗಾರಿ ನಡೆಸುವಾಗ ಫ್ಲೋರಿಂಗ್ ಕುಸಿದಿದೆ. ಈ ವೇಳೆ ಐದರಿಂದ ಆರು ಜನ ಕೆಲಸ ಮಾಡುವಾಗ ನಿಯಂತ್ರಣ ತಪ್ಪಿ ಬಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೃತ ಕಾರ್ಮಿಕರು ಸೋಲದೇವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಶೆಟ್ಟಿ ಹಳ್ಳಿಯಲ್ಲಿ ವಾಸವಿದ್ದರು. ಕಟ್ಟಡ ಮಾಲೀಕರು ಯಾರು ಎಂಬುದನ್ನ ಪರಿಶೀಲಿಸಲಾಗುತ್ತಿದೆ. ಅವಘಡ ಸಂಬಂಧ ದೂರು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.