ತುಮಕೂರು: ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 108 ಆಂಬ್ಯುಲೆನ್ಸ್ ಸಿಗದೇ ತಮ್ಮ ತಂದೆಯ ಮೃತದೇಹವನ್ನು ಪುತ್ರರು ಬೈಕ್‌ನಲ್ಲೇ ತಮ್ಮೂರಿಗೆ ಸಾಗಿಸಿರುವ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ ಹೊನ್ನೂರಪ್ಪ(80) ಎಂಬ ವೃದ್ಧನನ್ನು 108 ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿ ಹೊನ್ನೂರಪ್ಪ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ನಂತರ ಮೃತದೇಹವನ್ನು ಅದೇ ಆಂಬ್ಯುಲೆನ್ಸ್ನಲ್ಲಿ ಗ್ರಾಮಕ್ಕೆ ಕರೆದೊಯ್ಯುವಂತೆ ಮೃತ ಪುತ್ರರು ಆಂಬ್ಯುಲೆನ್ಸ್ ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೆ, 108 ಸಿಬ್ಬಂದಿ ನಮಗೆ ಶವ ಸಾಗಿಸಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ದಿಕ್ಕು ತೋಚದಂತಾದ ಮೃತನ ಪುತ್ರರಾದ ಚಂದ್ರಣ್ಣ ಮತ್ತು ಗೋಪಾಲಪ್ಪ ಗ್ರಾಮಕ್ಕೆ ಬೈಕ್‌ನಲ್ಲೇ ಮೃತದೇಹ ಸಾಗಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದೇನು?: ಘಟನೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಚಂದ್ರಶೇಖರ್ ಪ್ರತಿಕ್ರಿಯಿಸಿ, "ಮೃತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ ವಾಹನದಲ್ಲಿಯೇ ಮಾರ್ಗ ಮಧ್ಯೆ ವೃದ್ಧ ಮೃತಪಟ್ಟಿದ್ದರು. ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷೆ ನಡೆಸಿ ಆತ ಮೃತಪಟ್ಟಿರುದನ್ನು ಖಚಿತಪಡಿಸಿದ್ದರು" ಎಂದು ತಿಳಿಸಿದ್ದಾರೆ.