ಹಾಸನ: ನಗರದ ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವ್ಯಕ್ತಿಯೋರ್ವ ತನ್ನ ಸ್ನೇಹಿತನ ಮೇಲೆ ಗುಂಡಿನ ದಾಳಿ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸೀಫ್, ಶರಾಫತ್ ಆಲಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಇವರಿಬ್ಬರೂ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳದಲ್ಲೇ ಗನ್ ಕೂಡ ಪತ್ತೆಯಾಗಿದೆ.
ಸೈಟ್ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ಈ ಘಟನೆ ನಡೆದಿದೆ. ಮೇಲ್ನೋಟಕ್ಕೆ ಮೊದಲು ಓರ್ವ ತನ್ನ ಸ್ನೇಹಿತನಿಗೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ. ಘಟನೆ ಬಳಿಕ ನೆರೆಹೊರೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರಿಬ್ಬರು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದರು. ಜೊತೆಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ದೌಡಾಯಿಸಿ ಪರಿಶೀಲಿಸಿದರು. ಸ್ಥಳದಲ್ಲಿ ಬೆರಳಚ್ಚು ತಜ್ಞರು ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಾಕ್ಷಿ ಕಲೆಹಾಕುತ್ತಿದ್ದಾರೆ. ಆಸ್ತಿ ವಿಚಾರದಲ್ಲಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಐದು ಮಂದಿ ಮೇಲೆ ಹುಚ್ಚುನಾಯಿ ದಾಳಿ: ಓರ್ವ ಬಾಲಕಿಗೆ ಗಂಭೀರ ಗಾಯ - MAD DOG BITES