ಚಿಕ್ಕಮಗಳೂರು: ಬೈಕ್ಗೆ ನೇತು ಹಾಕಿದ್ದ ಬ್ಯಾಗ್‌ನಲ್ಲಿ ಹುಲಿ ತಲೆ ಬುರುಡೆ, ಹಲ್ಲು, ಉಗುರು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಕುಂಡ್ರ ಗ್ರಾಮದ ಸತೀಶ್ ಮತ್ತು ಸುಧೀರ್ ಬಂಧಿತರು.
ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಸತೀಶ್‌ನನ್ನು ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ಅರಣ್ಯ ಸಿಬ್ಬಂದಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೈಕ್ಗೆ ನೇತು ಹಾಕಿದ್ದ ಬ್ಯಾಗ್‌ನಲ್ಲಿ ಸತ್ತ ಹುಲಿಯ ಭಾಗಗಳು ಪತ್ತೆಯಾಗಿದೆ. ತಕ್ಷಣ ಸತೀಶ್ ಮತ್ತು ಆತನ ಜೊತೆಗಿದ್ದ ಸುಧೀರ್ ಎಂಬಿಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ಡಿಎಫ್ಒ ರಮೇಶ್ ಬಾಬು, ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಒಂದು ಹುಲಿ ತಲೆ ಬುರುಡೆ, ಮೂರು ಹಲ್ಲು, ಮೂರು ಉಗುರು, ಒಂದು ಮೂಳೆ, ನಾಲ್ಕು ಮೊಬೈಲ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿರತೆ ಬಳಿಕ ಹುಲಿ ಪ್ರತ್ಯಕ್ಷ: ಭಯದಲ್ಲಿ ಮಂಡ್ಯ ಜನತೆ!