ಕಲಬುರಗಿ: ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ಬಾಲಕಿಯರಿಬ್ಬರು ನೀರುಪಾಲಾದ ದಾರುಣ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬನ್ನಹಟ್ಟಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ನಡೆದಿದೆ.
ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಭೂಮಿಕಾ ಮತ್ತು ಶ್ರಾವಣಿ ಎಂಬ ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ತೊಳೆದ ಬಳಿಕ ನದಿಯಲ್ಲಿ ಈಜಾಡಲು ಮುಂದಾಗಿದ್ದ ವೇಳೆ ಭೂಮಿಕಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಆಗ ಅವಳನ್ನು ಶ್ರಾವಣಿ ಕಾಪಾಡಲು ಮುಂದಾಗಿದ್ದು, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಹಿತಿ ಸ್ಥಳಕ್ಕಾಗಮಿಸಿದ ತಿಳಿದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶ್ರಾವಣಿಯ ಶವವನ್ನು ಪತ್ತೆ ಮಾಡಿದ್ದಾರೆ. ಮತ್ತೊಬ್ಬ ಬಾಲಕಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಾಘಾತದಿಂದ ಹೋಟೆಲ್ ಸಿಬ್ಬಂದಿ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಪ್ರತ್ಯೇಕ ಘಟನೆಯಲ್ಲಿ, ಕೌಂಟರ್ ಬಳಿ ನಿಂತಲ್ಲೇ ಹೋಟೆಲ್ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಎದೆ ಝಲ್ ಎನ್ನಿಸುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಲಬುರಗಿಯ ಆಮಂತ್ರಣ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, ಮಂಗಳೂರು ಮೂಲದ 53 ವರ್ಷದ ರಾಜೇಶ್ ಮೃತ ವ್ಯಕ್ತಿ. ಕಳೆದ 15 ದಿನಗಳ ಹಿಂದಷ್ಟೇ ಈ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಮೃತರಾಗಿದ್ದಾರೆ. ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಧಾರಾಕಾರ ಮಳೆ: ಕೊಚ್ಚಿ ಹೋಗಿದ್ದ ಆಟೋ ಹೊರತೆಗೆದ ನಗರಸಭೆ ಸಿಬ್ಬಂದಿ