ಬೆಂಗಳೂರು: ಕ್ಯಾಂಟರ್ ಚಾಲಕನ ಅಜಾಗರೂಕತೆಗೆ ಎರಡು ಜೀವ ಬಲಿಯಾಗಿರುವ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಶನಿವಾರ) ಬೆಳಗ್ಗೆ ನಡೆದಿದೆ. ಶಾಹಿಬ್ ರಾಝಾ (21), ರೆಹಾನ್ ರಾಝಾ (14) ಸಾವನ್ನಪ್ಪಿದ ದುರ್ದೈವಿಗಳು. ಇಬ್ಬರು ಬನಾರಸ್ ಮೂಲದವರಾಗಿದ್ದು, ಈ ಸಂಬಂಧ ಕ್ಯಾಂಟರ್ ಚಾಲಕ ಸುರೇಶ್ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದು ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಸಮೀಪ ಬೆಳಗ್ಗೆ 8.28ರ ವೇಳೆ ಬೈಕ್ನಲ್ಲಿ ಬನಾರಸ್ ಮೂಲದ 21 ವರ್ಷದ ಶಾಹಿಬ್ ರಾಝಾ ಮತ್ತು 6ನೇ ತರಗತಿ ವಿದ್ಯಾರ್ಥಿ 14 ವರ್ಷದ ರೆಹಾನ್ ರಾಝಾ ಎಂಬ ಬಾಲಕ ಇಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವಾಹನ ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ್ದರಿಂದ ಏಕಾಏಕಿ ಚಲಿಸಿದ್ದು, ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಈ ವೇಳೆ ಇಬ್ಬರು ಬೈಕ್ನಿಂದ ಕೆಳಗೆ ಬಿದ್ದಿದ್ದು, ಟೈರ್ ಅಡಿಯಲ್ಲಿ ಸಿಲುಕಿದ್ರೆ ಸುಮಾರು 150 ರಿಂದ 200 ಮೀಟರ್ ಇಬ್ಬರನ್ನು ಕ್ಯಾಂಟರ್ ಎಳೆದೊಯ್ದಿದೆ. ಇಬ್ಬರು ಹಿಂಬದಿ ಟೈರ್ಗೆ ಸಿಲುಕಿ ಮೃತಪಟ್ಟಿದ್ದಾರೆ. ಇದಲ್ಲದೆ ರಸ್ತೆ ಬದಿ ನಿಲ್ಲಿಸಿದ್ದ 7 ಬೈಕ್ ಹಾಗೂ 2 ಕಾರು ಘಟನೆಯಲ್ಲಿ ಜಖಂ ಆಗಿವೆ. ಬೈಕ್ ಮುಂಬದಿಗೆ ಸಿಲುಕಿರಲಿಲ್ಲ ಅಂದಿದ್ರೆ ಕ್ಯಾಂಟರ್ ಮತ್ತಷ್ಟು ಮುಂದಕ್ಕೆ ಹೋಗಿ ಭಾರೀ ಅನಾಹುತವೇ ನಡೆದುಹೋಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಇದೇ ರಸ್ತೆಯಲ್ಲಿ ಮನೆಯೊಂದರ ಕಾಮಗಾರಿ ನಡೆಯುತ್ತಿದ್ದರಿಂದ ಬೇಕಾಗುವ ಹಾಲೋಬ್ಲಾಕ್ ಕಲ್ಲುಗಳನ್ನು ಇದೇ ಕ್ಯಾಂಟರ್ನಲ್ಲಿ ತರಿಸಲಾಗಿತ್ತು. ಅದನ್ನು ಇಳಿಸುವ ವೇಳೆ ಡ್ರೈವರ್ ಸುರೇಶ್ ಕ್ಯಾಂಟರ್ನ್ನು ನಿಧಾನವಾಗಿ ಮೂವ್ ಮಾಡಲು ನೋಡಿದ್ದಾನೆ. ಇಳಿಜಾರು ಇದ್ದ ಕಾರಣಕ್ಕೆ ಕ್ಯಾಂಟರ್ ಮುಂದಕ್ಕೆ ಚಲಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಆಗ್ತಿದ್ದಂತೆ ಚಾಲಕ ಅಲ್ಲಿಂದ ತಪ್ಪಿಸಿಕೊಂಡು, ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮೃತ ಶಾಹಿಬ್ ರಾಝಾ ಸೀರೆ ನೇಯುವ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ. ಇದೇ ರಸ್ತೆಯ ಕೊನೆಯಲ್ಲಿ ಆತನ ಮನೆ ಇದೆ. ಬೆಳಗ್ಗೆ ಅಂಗಡಿಗೆ ವಸ್ತುಗಳನ್ನು ತರಲು ಹೋದಾಗ ಅವಘಡ ಸಮಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಜ್ಜುಗುಜ್ಜಾಗಿದ್ದ ಬೈಕ್ಗಳನ್ನೆಲ್ಲ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದು ಅಪಘಾತಕ್ಕೆ ಅಸಲಿ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಅಟಲ್ ಸೇತುವೆಯಿಂದ ಆಯತಪ್ಪಿ ಬೀಳುತ್ತಿದ್ದ ಮಹಿಳೆಯ ರಕ್ಷಣೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ - Woman Rescued on Atal Setu