ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿರುವುದಕ್ಕೆ ಕಾರಣ ಹುಡುಕಲು ಅಖಿಲ ಭಾರತ ಕಾಂಗ್ರೆಸ್ ರಚಿಸಿರುವ ಸತ್ಯಶೋಧನಾ ಸಮಿತಿ ಸಭೆ ನಡೆಯುತ್ತಿದೆ. ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಸಿ ವರದಿ ಸಿದ್ಧಪಡಿಸಲಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನೇತೃತ್ವದ ಸತ್ಯಶೋಧನಾ ಸಮಿತಿ ಸಭೆ ನಡೆಸುತ್ತಿದ್ದು, ಸತ್ಯಶೋಧನಾ ಸಮಿತಿ ಸದಸ್ಯರಾಗಿರುವ ಸಂಸದ ಗೌರವ್ ಗೊಗೋಯಿ, ಹಿಬಿ ಹಿಡನ್, ಕರ್ನಾಟಕದಿಂದ ಆಯ್ಕೆಯಾದ ಎಐಸಿಸಿ ಪದಾಧಿಕಾರಿಗಳು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಶಾಸಕರು, ಸಂಸದರು, ಮುಖಂಡರು, ಕಾರ್ಯಕರ್ತರು, ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಸಚಿವರ ಜೊತೆ ಸಭೆ ನಡೆಸಿ ಹಿನ್ನಡೆಗೆ ಕಾರಣವಾದ ಅಂಶಗಳ ಮಾಹಿತಿಯನ್ನು ಸಂಗ್ರಹಿಸಲು ಸತ್ಯಶೋಧನಾ ಸಮಿತಿ ಮುಂದಾಗಿದೆ.
ಯಾವ ಕಾರಣಕ್ಕೆ ತಮ್ಮ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಯಿತು, ನಿಮಗಿದ್ದ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಿದ್ದೀರಿ, ಗ್ಯಾರಂಟಿ ಕೈ ಹಿಡಿಯದೇ ಇರಲು ಕಾರಣವೇನು? ಮತ್ತಿತರ ಮಾಹಿತಿಯನ್ನು ಸಮಿತಿ ಪಡೆದುಕೊಳ್ಳಲಿದೆ. ಇದೇ ವೇಳೆ, ಕೆಪಿಸಿಸಿಯು ಸತ್ಯ ಶೋಧನೆಗೆ ನಾಲ್ಕು ಪ್ರತ್ಯೇಕ ತಂಡ ರಚಿಸಿದ್ದು, ಅದು ಮಾಹಿತಿ ಸಂಗ್ರಹಿಸಿ ನೀಡುವ ವರದಿಯನ್ನು ಕೇಂದ್ರ ಸತ್ಯಶೋಧನಾ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.
ಇಂದು ಲೋಕಸಭಾ, ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರು, ಶಾಸಕರು, ಸಚಿವರುಗಳ ಜೊತೆ ಸಭೆ ನಡೆಸಿ ಅಭಿಪ್ರಾಯಗಳನ್ನು ಆಲಿಸಿತು. ಹಾಗೆಯೇ ಸಂಜೆ ಕೆಪಿಸಿಸಿ ಪದಾಧಿಕಾರಿಗಳು, ಪರಾಜಿತ ಅಭ್ಯರ್ಥಿಗಳ ಬಳಿಯಿಂದಲೂ ಮಾಹಿತಿ ಕಲೆ ಹಾಕಲಿದೆ. ನಾಳೆ ಪ್ರದೇಶ ಕಾಂಗ್ರೆಸ್‌ನ ಎಲ್ಲ ವಿಭಾಗದ ಪದಾಧಿಕಾರಿಗಳ ಜತೆಯೂ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆಯಲಿದೆ.
ಈ ಎರಡೂ ದಿನಗಳ ಸಭೆಯ ನಂತರ ಸತ್ಯ ಶೋಧನಾ ಸಮಿತಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ ಎಐಸಿಸಿ ಅಧ್ಯಕ್ಷರಿಗೆ ವರದಿ ನೀಡಲಿದೆ. ಚುನಾವಣೆಯಲ್ಲಿ ಯಾರು ಪಕ್ಷದ ಪರ ಕೆಲಸ ಮಾಡಿದ್ದಾರೆ, ಯಾರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಸತ್ಯಶೋಧನಾ ಸಮಿತಿ ಸಂಗ್ರಹಿಸಿ ವರಿಷ್ಠರಿಗೆ ನೀಡಲಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ.
ಪರಾಮರ್ಶಿಸಿ ತಪ್ಪು, ಸರಿಪಡಿಸಿಕೊಳ್ಳುತ್ತೇವೆ: ಸಭೆಗೂ ಮುನ್ನ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, "ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಇಂದು ಪರಾಮರ್ಶೆ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ನಾನು ಕೂಡ ನಾಲ್ಕು ವಿಭಾಗಗಳ ವರದಿ ಕಳುಹಿಸಿಕೊಡಲಿದ್ದೇನೆ. ನಾನು ಹಾಗೂ ಮುಖ್ಯಮಂತ್ರಿಗಳು ಸೇರಿ ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಪರಾಮರ್ಶೆ ಮಾಡುತ್ತೇವೆ" ಎಂದರು.
"ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅತ್ಯುತ್ತಮ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸಿದ್ದೆವು. ಎಲ್ಲಾ ಕಡೆ ಒಟ್ಟಾಗಿ ಚುನಾವಣೆ ನಡೆಸಲಾಗಿತ್ತು. ಆದರೆ ಜನರ ಮಧ್ಯೆ ಗುಪ್ತಗಾಮಿನಿಯಲ್ಲಿ ಯಾವ ವಿಚಾರ ಪರಿವರ್ತನೆ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪರಿಣಾಮಕಾರಿಯಾಗಲಿದೆ ಎಂದು ನಾವು ಮೊದಲೇ ಅಂದಾಜಿಸಿದ್ದೆವು. ಮುಂದಿನ ದಿನಗಳಲ್ಲೂ ಅವರು ಒಟ್ಟಾಗಿರುತ್ತಾರೆ ಎಂದು ನಮಗೆ ಗೊತ್ತಿದೆ. ಅವರು ಹಾಗೆಯೇ ಇರಲಿ. ಅವರು ಒಟ್ಟಾಗಿದ್ದರೂ ನಾವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೋ ಮಾಡುತ್ತೇವೆ" ಎಂದು ಹೇಳಿದರು.
ಎಸ್ಸಿಪಿ- ಟಿಎಸ್‌ಪಿ ಹಣ ಪರಿಶಿಷ್ಟರಿಗೆ ವಿನಿಯೋಗ: ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ ಟಿಎಸ್‌ಪಿ ಅನುದಾನ ಬಳಸಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, "ಇಡೀ ದೇಶದಲ್ಲಿ ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿ ನಾವು ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿ ಬಳಸಲು ಕಾಯ್ದೆ ತಂದಿದ್ದೇವೆ. ರಾಷ್ಟ್ರೀಯ ಆಯೋಗ ನೊಟೀಸ್ ಜಾರಿ ಮಾಡುವುದೇ ಆದರೆ ಅದು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಈ ಅನುದಾನವನ್ನು ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಅವರಿಗೆ ವಿನಿಯೋಗಿಸುತ್ತಿದೆ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು. ಎಸ್ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ" ಎಂದರು.