ಹಾವೇರಿ: ಜಿಲ್ಲಾ ಸಮೀಪದ ಕನಕಾಪುರ ಬಳಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಒಡೆದು ತಿಂಗಳುಗಳೇ ಗತಿಸಿವೆ. ಆದರೆ, ರೈತರಿಗೆ ಪರಿಹಾರ ನೀಡುತ್ತೇವೆ, ಕಾಲುವೆ ದುರಸ್ತಿ ಮಾಡುತ್ತೇವೆ ಎಂದ ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕಾಲುವೆಯಲ್ಲಿ ಈಗಲೂ ನೀರು ಹರಿಯುತ್ತಿದ್ದು, ರೈತರು ಜಮೀನುಗಳಿಗೆ ನೀರು ನುಗ್ಗುತ್ತಿದೆ. ನಿಂತ ನೀರಲ್ಲಿ ಹಿಂಗಾರು ಬಿತ್ತನೆ ಮಾಡಲಾಗದ ರೈತರು ಇದೀಗ ಪಂಪಸೆಟ್‌ಗಳ ಮೂಲಕ 10 ಸಾವಿರ ರೂಪಾಯಿ ಸೇರಿದಂತೆ ಸಹಸ್ರಾರು ರೂಪಾಯಿ ಖರ್ಚು ಮಾಡಿ ತಮ್ಮ ಜಮೀನಿನಲ್ಲಿದ್ದ ನೀರು ಬೇರೆ ಕಡೆ ಕಳುಹಿಸುತ್ತಿದ್ದಾರೆ.
ಸಾವಿರಾರು ಎಕರೆಗೆ ನುಗ್ಗಿದ ನೀರು, ಹಾಳಾದ ಫಸಲು: ಮುಂಗಾರಿನಲ್ಲಿ ಸುರಿದ ಅಧಿಕ ಪ್ರಮಾಣದ ಮಳೆ ನೀರು ಸಾಕಷ್ಟು ಹಾನಿ ಮಾಡಿತ್ತು. ನಂತರ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿತ್ತು. ಪರಿಣಾಮ ಬೆಳೆದು ನಿಂತಿದ್ದ ಹತ್ತಿ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಸೇರಿದಂತೆ ಸಾವಿರಾರು ಎಕರೆ ಜಮೀನು ನೀರು ಪಾಲಾಗಿತ್ತು. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು.
ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳ ದಂಡು: ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಯುಟಿಪಿ ಅಧಿಕಾರಿಗಳ ದಂಡೇ ಸ್ಥಳಕ್ಕೆ ಆಗಮಿಸಿತ್ತು. ರೈತರಿಗೆ ಧೈರ್ಯ ತುಂಬಿದ್ದ ಅಧಿಕಾರಿಗಳು ಕಾಲುವೆ ದುರಸ್ತಿ ಪಡೆಸುವುದಾಗಿ ತಿಳಿಸಿದ್ದರು. ಅಲ್ಲದೇ ಕಾಲುವೆ ಒಡೆದು ಬೆಳೆಹಾನಿಯಾದ ರೈತರಿಗೆ ಸೂಕ್ತಪರಿಹಾರ ನೀಡುವದಾಗಿ ಭರವಸೆ ನೀಡಿದ್ದರು. ಆದರೆ, ಕಾಲುವೆ ಒಡೆದು ತಿಂಗಳುಗಳೇ ಗತಿಸಿದರೂ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಂಗಾರು ಬೆಳೆ ಬೆಳೆಯುವುದಾದರೂ ಹೇಗೆ?: ಕಾಲುವೆ ಒಡೆದು ಹಾನಿಗೊಳಗಾದ ಬೆಳೆಗೆ ಪರಿಹಾರ ಇರಲಿ ಕೊನೆಯಪಕ್ಷ ಕಾಲುವೆ ದುರಸ್ತಿ ಸಹ ಮಾಡಿಲ್ಲ. ಇದರಿಂದ ನಾವು ಹಿಂಗಾರು ಬೆಳೆ ಬೆಳೆಯುವುದು ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಜಮೀನಿನಲ್ಲಿ ನೀರು ನಿಂತರೆ ಬಿತ್ತನೆ ಹೇಗೆ ಮಾಡಬೇಕು. ಆಯಿಲ್ ಮಷಿನ್ ಬಾಡಿಗೆ ತಂದು ಜಮೀನಿನಲ್ಲಿರುವ ನೀರನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ನೀರು ಬೇರೆ ಕಡೆ ಕಳುಹಿಸಿದರೂ ಸಹ ಬಸಿ ನೀರು ಬರುತ್ತಿದೆ. ಇದರಲ್ಲಿ ಬಿತ್ತನೆ ಮಾಡಲಿಕ್ಕೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎನ್ನುತ್ತಾರೆ ರೈತರು.
ದುರಸ್ತಿಯ ಭರವಸೆ ನೀಡಿದ ಜಿಲ್ಲಾಡಳಿತ: ಜಿಲ್ಲಾಡಳಿತ ಪರಿಹಾರ ನೀಡುವ ಕಾಲುವೆ ದುರಸ್ತಿಪಡಿಸುವ ಭರವಸೆ ನೀಡಿದೆ. ಆದರೆ, ಇದುವರೆಗೊ ಯಾವುದೇ ಪರಿಹಾರ ನೀಡಿಲ್ಲ ಮತ್ತು ದುರಸ್ತಿಯನ್ನೂ ಸಹ ಮಾಡಿಲ್ಲ. ಜಿಲ್ಲಾಡಳಿತ ಈಗಲಾದರೂ ಕಾಲುವೆ ದುರಸ್ತಿಪಡಿಸಿ ಬೆಳೆಹಾನಿಗೊಳಗಾದ ರೈತರ ಸಹಾಯಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ಭತ್ತ ಕಟಾವು ಯಂತ್ರಕ್ಕೆ ಡಿಮ್ಯಾಂಡ್: ಭತ್ತದ ದರ ಕುಸಿತ, ಅನ್ನದಾತನ ಆಕ್ರೋಶ