ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಇಂದು ಆಗಮಿಸಿದ ಅಭಿಮನ್ಯು ನೇತೃತ್ವದ 9 ಆನೆಗಳನ್ನು ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಸ್ವಾಗತಿಸಲಾಯಿತು.
ಆಗಸ್ಟ್ 21ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಅಭಿಮನ್ಯು ನೇತೃತ್ವದ 9 ಗಜಪಡೆ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು. ಇಂದು ಬೆಳಗ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಣ್ಯ ಭವನದಿಂದ ಗಜಪಡೆಯನ್ನು ಬೀಳ್ಕೊಡಲಾಯಿತು. ನಂತರ ನಗರದ ಕೃಷ್ಣಮೂರ್ತಿಪುರಂ, ಡಬ್ಬಲ್ ರೋಡ್ ಮೂಲಕ ಅರಮನೆಯ ಮುಖ್ಯದ್ವಾರದಲ್ಲಿ ಗಜಪಡೆಯನ್ನು ಸ್ವಾಗತಿಸಲಾಯಿತು.
ಬೆಳಗ್ಗೆ 10.10ರಿಂದ 10.30ರ ಶುಭ ತುಲಾ ಲಗ್ನದಲ್ಲಿ ಗಜಪಡೆಯನ್ನು ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸ್ವಾಗತಿಸಿದರು.
ಬಳಿಕ ಆನೆ ಬಾಗಿಲಿನ ಬಳಿ ಅರಮನೆ ಆಡಳಿತ ಮಂಡಳಿಯೂ ಸ್ವಾಗತಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಇದೀಗ ಆನೆಗಳು ಕೋಟಿ ಸೋಮೇಶ್ವರ ದೇವಾಲಯದ ಬಳಿ ವಾಸ್ತವ್ಯ ಹೂಡಿವೆ. ಇಂದಿನಿಂದ 50 ದಿನಗಳಿಗೂ ಈ ಆನೆಗಳು ಅರಮನೆ ಆವರಣದಲ್ಲೇ ಇರಲಿವೆ. ಬಳಿಕ ತಾಲೀಮು ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಅಭಿಮನ್ಯು ನೇತೃತ್ವದಲ್ಲಿ ತಯಾರಿ ನಡೆಸಲಾಗುತ್ತದೆ.
ಅರಣ್ಯ ಭವನದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ ಮಾತನಾಡಿ, "ಮುಂದಿನ ವಾರ 2ನೇ ಹಂತದ ಗಜಪಡೆ ಆಗಮಿಸಲಿವೆ. 48 ದಿನಗಳ ಕಾಲ ತಾಲೀಮು ನಡೆಸಿ ಜಂಜೂ ಸವಾರಿಗೆ ಗಜಪಡೆಯನ್ನು ಸಿದ್ದಗೊಳಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.
ಅರಮನೆ ಪ್ರವೇಶಿಸಿದ ಗಜಪಡೆಗಳ ವಿವರ: ಅಭಿಮನ್ಯು (58 ವರ್ಷ), ಭೀಮ (24 ವರ್ಷ) , ಗೋಪಿ (41 ವರ್ಷ), ಧನಂಜಯ (43 ವರ್ಷ), ಕಂಜನ್ (25 ವರ್ಷ), ರೋಹಿಣಿ (22 ವರ್ಷ), ಲಕ್ಷ್ಮಿ (53 ವರ್ಷ), ವರಲಕ್ಷ್ಮಿ (67 ವರ್ಷ), ಏಕಲವ್ಯ (38 ವರ್ಷ).
ಇದನ್ನೂ ಓದಿ: ಮೈಸೂರು ದಸರಾ: ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ - DASARA GAJAPADE