ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಪ್ತನದಿಗಳ ನಾಡು ಬೆಳಗಾವಿ ಜಿಲ್ಲೆಯಲ್ಲಿ ಒಂದೆಡೆ ಪ್ರವಾಹ ಸೃಷ್ಟಿಯಾಗಿ ಸಾವಿರಾರು ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದರೆ, ಮತ್ತೊಂದೆಡೆ ಗೊಡಚಿನಮಲ್ಕಿ ಜಲಪಾತದ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಗೋಕಾಕ್ನಿಂದ 18 ಕಿ.ಮೀ ದೂರದಲ್ಲಿರುವ ಗೊಡಚಿನಮಲ್ಕಿ ಗ್ರಾಮದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಕಣಿವೆಯೊಂದರಲ್ಲಿ ಮಾರ್ಕಂಡೇಯ ನದಿ ರಭಸದಿಂದ ಹರಿದು, ಪುಟಿದೇಳುವುದರಿಂದ ಗೊಡಚಿನಮಲ್ಕಿ ಜಲಪಾತ ರೂಪುಗೊಳ್ಳುತ್ತದೆ. ಮಳೆಗಾಲದಲ್ಲಿ ನದಿ ರಭಸದಿಂದ ಹರಿಯುತ್ತದೆ. ಕರಿ ಬಂಡೆಗಳು ನಡುವೆ ಹರಿಯುವ ನದಿ, ಎತ್ತರಕ್ಕಿಂತಲೂ ವಿಶಾಲತೆಗೆ ಹೆಸರಾದ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ನಿನ್ನೆ ರಜೆ ಇದ್ದುದರಿಂದ ಗೊಡಚಿನಮಲ್ಕಿ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು, ರೀಲ್ಸ್ ಮಾಡಿ ಯುವಕ-ಯುವತಿಯರು ಸಂಭ್ರಮಿಸುತ್ತಿದ್ದಾರೆ.
'ಈಟಿವಿ ಭಾರತ' ಜೊತೆಗೆ ಮಾತನಾಡಿದ ಪ್ರವಾಸಿಗರು, "ನಮ್ಮ ಇಡೀ ಕುಟುಂಬ ಇಲ್ಲಿಗೆ ಬಂದಿದೆ. ಮಕ್ಕಳನ್ನೂ ಕರೆದುಕೊಂಡು ಬಂದಿದ್ದೇವೆ. ನೀರು ರಭಸದಿಂದ ಧುಮ್ಮಿಕ್ಕುತ್ತಿರುವುದು ಕಣ್ಣಿಗೆ ಒಂಥರಾ ಹಬ್ಬ. ವೀಕೆಂಡ್ಗಿದು ಒಳ್ಳೆಯ ತಾಣ. ಒಂದು ಕಿ.ಮೀ ದೂರದಲ್ಲಿ ವಾಹನ ಪಾರ್ಕ್ ಮಾಡಿ ನಡೆದುಕೊಂಡು ಬಂದಿದ್ದಕ್ಕೆ ಏನೂ ಮೋಸ ಇಲ್ಲ. ಮಕ್ಕಳು ಮತ್ತು ಮನೆಯವರೊಂದಿಗೆ ಸಖತ್ ಖುಷಿಪಟ್ಟೆವು" ಎಂದರು.
ಮತ್ತೋರ್ವ ಪ್ರವಾಸಿಗರು ಮಾತನಾಡಿ, "ಗೊಡಚಿನಮಲ್ಕಿ ಜಲಪಾತ ನೋಡಲು ತುಂಬಾ ಸುಂದರವಾಗಿದೆ. ಮಳೆರಾಯನ ಅಬ್ಬರದಿಂದ ಜಲಪಾತ ರಮಣೀಯವಾಗಿ ಹರಿಯುತ್ತಿದೆ. ಈ ದೃಶ್ಯ ನೋಡುವುದೇ ಚಂದ. ನಾವು ಕುಟುಂಬಸಮೇತ ಇಲ್ಲಿಗೆ ಬಂದಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
ಚಿಕ್ಕೋಡಿಯಿಂದ ಬಂದಿದ್ದ ಯುವಕ ಪ್ರತಿಕ್ರಿಯಿಸಿ, "ಇಂದು ಕೆಲಸಕ್ಕೆ ರಜೆ ಇತ್ತು. ಹಾಗಾಗಿ ಸಹೋದರರು ಮತ್ತು ಸ್ನೇಹಿತರು ಎಲ್ಲರೂ ಸೇರಿಕೊಂಡು ಗೊಡಚಿನಮಲ್ಕಿಗೆ ಬಂದಿದ್ದೇವೆ. ನೀರಿನಲ್ಲಿ ಇಳಿಯುವ ದುಸ್ಸಾಹಸಕ್ಕೆ ಯಾರೂ ಕೈ ಹಾಕಬಾರದು. ಸುರಕ್ಷಿತವಾಗಿ ದೂರದಲ್ಲೇ ನಿಂತು ನೋಡಿ ಹೋಗಬೇಕು. ಈ ವರ್ಷ ಯಾವುದೇ ಅನಾಹುತ ಸಂಭವಿಸಿಲ್ಲ" ಎಂದು ಹೇಳಿದರು.
ಯುವಕರ ಹುಚ್ಚಾಟ: ವಿಶಾಲ ಬೆಟ್ಟದಿಂದ ಹರಿದು ಬರುವ ಜಲಪಾತ ಮುಂದೆ ಸ್ವಲ್ಪ ಎತ್ತರದಲ್ಲಿ ಧುಮ್ಮಿಕ್ಕುತ್ತದೆ. ಕೆಲವು ಯುವಕರು ಪೊಲೀಸರ ಕಣ್ತಪ್ಪಿಸಿ ಈ ದೃಶ್ಯವನ್ನು ಸಮೀಪದಿಂದ ಕಣ್ತುಂಬಿಕೊಂಡು, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಗಮನಾರ್ಹ.
ಗೊಡಚಿನಮಲ್ಕಿ ಜಲಪಾತಕ್ಕೆ ಹೋಗುವುದು ಹೇಗೆ?: ಬೆಳಗಾವಿಯಿಂದ 51 ಕಿ.ಮೀ ದೂರದಲ್ಲಿ ಗೊಡಚಿನಮಲ್ಕಿ ಜಲಪಾತವಿದೆ. ಗೋಕಾಕ್ ಮೂಲಕವೂ ಬಸ್ ಸೌಕರ್ಯವಿದೆ. ಅಲ್ಲದೇ ಜಲಪಾತದಿಂದ 9 ಕಿ.ಮೀ ದೂರದಲ್ಲಿ ಪಾಶ್ಚಾಪುರವರೆಗೆ ರೈಲು ಸಂಪರ್ಕವೂ ಇದೆ. ಜಲಪಾತಕ್ಕೆ ಭೇಟಿ ನೀಡುವವರು ಈ ದಾರಿ ಮೂಲಕ ಸಾಗಬಹುದು.