ದಾವಣಗೆರೆ: ಅಂಗಡಿ ಮುಂಗಟ್ಟು, ಶಾಪ್ಗಳು, ಸೇರಿದಂತೆ ದೊಡ್ಡದೊಡ್ಡ ಶೋರೂಂಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಮಸೂದೆ ಮಂಡನೆ ಮಾಡಿದೆ. ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿ ಸೈ ಎಂದಿದ್ದಾರೆ. ಫೆ 28ರ ಒಳಗೆ ಕನ್ನಡ ನಾಮಫಲಕಗಳ ಅಳವಡಿಕೆಗೆ ಸರ್ಕಾರ ಗಡುವು ನೀಡಿದೆ.
ದುರಂತ ಎಂದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾತ್ರ ಇಲ್ಲಿ ತನಕ ನಾಮಫಲಕಗಳಲ್ಲಿ ಶೇ 40 ಭಾಗದಷ್ಟು ಪರ ಭಾಷೆಯ ಫಲಕಗಳೇ ರಾರಾಜಿಸುತ್ತಿವೆ. ಕನ್ನಡ ಭಾಷೆ ಎಲೆಮರೆ ಕಾಯಿಯಂತಿದೆ. "ಕನ್ನಡ ಅಳವಡಿಕೆ ಮಾಡಲಿಲ್ಲ ಎಂದರೆ ಟ್ರೇಡ್ ಲೈಸೆನ್ಸ್" ರದ್ದು ಮಾಡುವುದಾಗಿ ದಾವಣಗೆರೆ ಪಾಲಿಕೆ ಆಯುಕ್ತರು ಗುಡುಗಿದ್ದಾರೆ.
ಮಧ್ಯ ಕರ್ನಾಟಕದ ಕೇಂದ್ರ ಬಿಂದು, ವಾಣಿಜ್ಯ ನಗರಿ ಎಂದೆಲ್ಲ ಕರೆಸಿಕೊಳ್ಳುವ ದಾವಣಗೆರೆಯಲ್ಲಿ ಅಪ್ಪಟ ಕನ್ನಡ ಭಾಷೆಯನ್ನೇ ಹೆಚ್ಚು ಜನ ಬಳಕೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನು ಬಳಕೆ ಮಾಡುವ ಜಿಲ್ಲೆಗಳ ಸಾಲಿನಲ್ಲಿ ದಾವಣಗೆರೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದರೆ ಅಂಗಡಿ, ಹೋಟೆಲ್, ಶಾಪ್, ಶೋರೂಂ ಹೀಗೆ ನಾನಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡ ಭಾಷೆಯನ್ನು ಮರೆಮಾಚಲಾಗಿದೆ.
ಈ ವೇಳೆ ಪಾಲಿಕೆ ಆಯುಕ್ತೆ ರೇಣುಕಾ ಅವರು ಪ್ರತಿಕ್ರಿಯಿಸಿ "ಕನ್ನಡ ನಾಮಫಲಕಗಳನ್ನು ಅಳವಡಿಸಲು ರಾಜ್ಯ ಸರ್ಕಾರದ ನಿರ್ದೇಶನ ಇದೆ. ನಾಮಫಲಕದಲ್ಲಿ ಶೇ60 ರಷ್ಟು ಭಾಗ ಕನ್ನಡ ಭಾಷೆ ಮೇಲೆ ಇರಬೇಕು, ಉಳಿದ ಶೇ 40% ರಷ್ಟು ಭಾಗದಲ್ಲಿ ಬೇರೆ ಭಾಷೆಯಲ್ಲಿ ಕನ್ನಡ ಭಾಷೆಯ ಕೆಳಗೆ ಅಳವಡಿಸಬಹುದಾಗಿದೆ. ಕಸದ ಆಟೋದಲ್ಲಿ ಅನೌನ್ಸ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ಆದರೂ ಕನ್ನಡ ನಾಮಫಲಕ ಅಳವಡಿಕೆ ಮಾಡಿಲ್ಲ. ಇದಲ್ಲದೆ ದಫೇದಾರ್, ಹಾಗು ಹೆಲ್ತ್ ಇನ್ಸ್ಪೆಕ್ಟರ್ ಹೋಗಿ ಹೇಳಿ ನೋಟಿಸ್ ಕೊಟ್ಟು ಪರ ಭಾಷೆಯ ನಾಮಫಲಕಗಳನ್ನು ತೆಗೆಸಿರುವ ಉದಾಹರಣೆ ಇದೆ. ಇಷ್ಟಾದರೂ ನಾಮಫಲಕಗಳನ್ನು ಅಳವಡಿಕೆ ಮಾಡಲಿಲ್ಲ ಎಂದರೆ ಅವರ ಟ್ರೇಡ್ ಲೈಸೆನ್ಸ್ನ್ನು ರದ್ದು ಮಾಡುತ್ತೇವೆ" ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕನ್ನಡ ನಾಮಫಲಕ ಅಳವಡಿಸಿ ಇಲ್ಲ, ರಾಜ್ಯ ಬಿಟ್ಟು ತೊಲಗಿ- ಕರವೇ ಆಕ್ರೋಶ: ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ದಾವಣಗೆರೆ ಜಿಲ್ಲಾ ಕರವೇ (ನಾರಾಯಣ ಗೌಡ ಬಣ) ಜಿಲ್ಲಾಧ್ಯಕ್ಷ ರಾಮೇಗೌಡ ಪ್ರತಿಕ್ರಿಯಿಸಿ "ಬೆಂಗಳೂರಿನಲ್ಲಿ ದೊಡ್ಡ ಹೋರಾಟ ನಡೆದಿತ್ತು. ಮರು ದಿನವೇ ಇದಕ್ಕೆ ಮಸೂದೆ ಮಂಡನೆಯಾಗಿ ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ದಾವಣಗೆರೆಯಲ್ಲಿ ಆಂಗ್ಲ ನಾಮಫಲಕಗಳು ರಾರಾಜಿಸುತ್ತಿವೆ. ಇದು ಪಾಲಿಕೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ರೀತಿಯಾಗಿದೆ, ನಗದಲ್ಲಿ 40% ರಷ್ಟು ಬೇರೆ ಭಾಷೆಯ ನಾಮಫಲಕ ಇವೆ.
ರಾಜ್ಯ ಸರ್ಕಾರ ಆದೇಶ ಮಾಡಿ ಸುಮ್ಮನೆ ಕೈಕಟ್ಟಿ ಕೂತಿದೆ. ಪಾಲಿಕೆ ಕಾಟಾಚಾರಕ್ಕೆ ಮಾತ್ರ ನಾಲ್ಕೈದು ಜನರಿಗೆ ನೋಟಿಸ್ ಕೊಟ್ಟು ಸುಮ್ಮನಾಗಿದೆ. ಕನ್ನಡ ನಾಮಫಲಕ ಅಳವಡಿಸಲು ಸರ್ಕಾರ ಫೆ. 28 ಕ್ಕೆ ಕೊನೆ ದಿನ ಎಂದು ನಿಗದಿ ಮಾಡಿದೆ. ಆದರೂ ಕನ್ನಡ ನಾಮಫಲಕಗಳು ಮಾತ್ರ ಮರೀಚಿಕೆಯಾಗಿವೆ. ಕನ್ನಡ ಬೇಡ ಎನ್ನುವರು ಕರ್ನಾಟಕ ಬಿಟ್ಟು ತೊಲಗಿ, ಪಾಲಿಕೆ ವಿರುದ್ಧ ಹೋರಾಟ ಮಾಡುವ ಮೂಲಕ ಪರ ಭಾಷೆಯ ಫಲಕಗಳನ್ನು ಕಿತ್ತುಹಾಕುವ ಕೆಲಸವನ್ನು ಕರವೇ ಮಾಡುತ್ತೆ ಎಂದರು.
ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ: ಸರ್ಕಾರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ