ಮೈಸೂರು: ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಶನಿವಾರ ಸಾಯಂಕಾಲ ನಡೆದಿದೆ. ಮಹಿಳೆಯ ಮೃತದೇಹ ಅರಣ್ಯ ವೀಕ್ಷಣೆಯ ಟವರ್ ಮೇಲೆ ಭಾನುವಾರ ಬೆಳಗ್ಗೆ ದೊರೆತಿದೆ.
ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ (48) ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರು. ಮೂರ್ಬಾಂದ್ ಬೆಟ್ಟದ ಸಮೀಪ ಮೇಕೆ ಮೇಯಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಸಹಚರ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ಮೃತದೇಹಕ್ಕಾಗಿ ಹುಡುಕಾಟ ನಡೆದರೂ ಕತ್ತಲು ಆವರಿಸಿದ್ದರಿಂದ ಸಿಕ್ಕಿರಲಿಲ್ಲ. ಬಳಿಕ ಭಾನುವಾರ ಬೆಳಗ್ಗೆ ಅರಣ್ಯ ವೀಕ್ಷಣೆಯ ಟವರ್ ಮೇಲೆ ಶವ ಪತ್ತೆಯಾಗಿದೆ.
ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮನೆಯೊಳಗೆ ನುಗ್ಗಿದ 12 ಅಡಿ ಉದ್ದದ ಕಾಳಿಂಗ ಸರ್ಪ!: ವಿಡಿಯೋ ನೋಡಿ - King Cobra