ಬೆಳಗಾವಿ: ಮೂವರು ಯುವಕರಿಗೆ ಚಾಕು ಇರಿದ ಘಟನೆ ಕಳೆದ ಮಧ್ಯರಾತ್ರಿ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳ ಗಾಯಗೊಂಡಿದ್ದಾರೆ. ಯುವಕರ ಹೊಟ್ಟೆಯ ಭಾಗಕ್ಕೆ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಜಿಲ್ಲಾಸ್ಪತ್ರೆಗೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದರು. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಚೆನ್ನಮ್ಮ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಚಾಕು ಇರಿತ ಆಗಿಲ್ಲ, ಜಗಳವಾಗಿತ್ತು. ನಮ್ಮ ಪೊಲೀಸರು ಜಗಳ ಬಿಡಿಸಿ ಕಳುಹಿಸಿದ್ದರು. ನಮಗೆ ದೊರೆತ ಮಾಹಿತಿ ಪ್ರಕಾರ, ಎರಡು ಗುಂಪಿನವರಿಗೆ ಈ ಹಿಂದೆ ಹಳೆ ದ್ವೇಷವಿತ್ತಂತೆ. ಎಲ್ಲರೂ ಡ್ಯಾನ್ಸ್ ಮಾಡುವಾಗ ಒಬ್ಬರಿಗೊಬ್ಬರಿಗೆ ಕೈ ತಾಗಿ ಜಗಳ ನಡೆದಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹೇಳಿದರು.
ಮೂವರು ಆರೋಪಿಗಳ ಬಂಧನ: ಈ ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುರಿ, ಮಹೇಶ, ವಿಜಯ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು 'ಈಟಿವಿ ಭಾರತ' ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರಕರಣ ಎಪಿಎಂಸಿ ಪೊಲೀಸ್ ಠಾಣೆಯಿಂದ ಖಡೇಬಜಾರ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.
ಇದನ್ನೂ ಓದಿ: ಯುವಕನನ್ನು ನಗ್ನಗೊಳಿಸಿ ಹಲ್ಲೆ ಕೇಸ್: ಪೊಲೀಸರ ಮೇಲೆ ಹಲ್ಲೆಗೈದು ಪರಾರಿ ಯತ್ನ, ರೌಡಿಶೀಟರ್‌ಗೆ ಗುಂಡೇಟು - Rowdy Sheeter Shot